ರಾಜ್ಯ ಬಿಜೆಪಿಯಲ್ಲಿ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕೆ ಪೈಪೋಟಿ

ಬೆಂಗಳೂರು,ನ.16- ರಾಜ್ಯ ಬಿಜೆಪಿಯಲ್ಲೀಗ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ದಿವಂಗತ ಅನಂತ ಕುಮಾರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಲಾಬಿ ಆರಂಭವಾಗಿದೆ.

ಕೇಂದ್ರ ಸಚಿವ ಅನಂತಕುಮಾರ್ ನಿಧನದ ಬಳಿಕ ಅವರು ನಿಭಾಯಿಸುತ್ತಿದ್ದ ಖಾತೆಗಳನ್ನು ಪ್ರಧಾನಿ ಮೋದಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಂಚಿಕೆ ಮಾಡಿದ್ದು, ಅದರಂತೆ ರಾಜ್ಯದಲ್ಲೀಗ ಅನಂತಕುಮಾರ್ ಅವರಿಂದ ತೆರವಾಗಿರುವ ಕೋರ್ ಕಮಿಟಿ ಸದಸ್ಯ ಸ್ಥಾನಕ್ಕೂ ಫೈಟಿಂಗ್ ಶುರುವಾಗಿದೆ.

ಒಂದು ಸ್ಥಾನಕ್ಕೆ ಐವರು ಫೈಟ್?:
ಕೋರ್ ಕಮಿಟಿಯಲ್ಲಿ ಸದಸ್ಯತ್ವ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಆದರೆ ಪೈಪೋಟಿ ಮಾತ್ರ ಜೋರಾಗಿದೆ. ಕೇವಲ ಒಂದು ಸ್ಥಾನಕ್ಕಾಗಿ ಐವರು ನಾಯಕರು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಸುರೇಶ್‍ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬಿ.ಶ್ರೀರಾಮುಲು ರೇಸ್‍ನಲ್ಲಿದ್ದಾರೆ.

ಅನಂತಕುಮಾರ್ ಹೆಗಡೆ ಬ್ರಾಹ್ಮಣ ಸಮುದಾಯ ಹಾಗೂ ಕೇಂದ್ರ ಸಚಿವ ಖೋಟಾದಡಿಯಲ್ಲಿ ರೇಸ್‍ನಲ್ಲಿದ್ರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಬ್ರಾಹ್ಮಣ ಸಮುದಾಯ, ಮಾಜಿ ಸಚಿವ ಮತ್ತು ಹಾಲಿ ಶಾಸಕರ ಖೋಟಾದಡಿ ರೇಸ್‍ನಲ್ಲಿದ್ದಾರೆ.

ಎಸ್.ಸುರೇಶ್‍ಕುಮಾರ್, ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಶಾಸಕ (ಬೆಂಗಳೂರು), ಮಾಜಿ ಸಚಿವ, 2018ರ ರಾಜ್ಯ ಚುನಾವಣೆಗೆ ಬಿಜೆಪಿ ಪ್ರಣಾಳಿಕಾ ಸಮಿತಿ ಅಧ್ಯಕ್ಷ ಖೋಟಾದಡಿ ಪೈಪೋಟಿ ನೀಡಿದ್ದಾರೆ.

ಹಾಗೇ ಶೋಭಾ ಕರಂದ್ಲಾಜೆ, ಮಾಜಿ ಸಚಿವೆ, ಹಾಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ಮಹಿಳಾ ಖೋಟಾದಡಿಯಲ್ಲಿ ರೇಸ್‍ನಲ್ಲಿದ್ರೆ, ಬಿ.ಶ್ರೀರಾಮುಲು. ಮಾಜಿ ಸಚಿವ, ಹಾಲಿ ಶಾಸಕ, ವಾಲ್ಮೀಕಿ ಸಮುದಾಯ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಖೋಟಾದಡಿಯಲ್ಲಿ ರೇಸ್‍ನಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ಶೋಭಾಗೆ ವಿರೋಧ..!
ಇನ್ನು, ಕೋರ್ ಕಮಿಟಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ಸ್ಥಾನ ನೀಡಲು ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಕೋರ್ ಕಮಿಟಿ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಶೋಭಾ ಕರಂದ್ಲಾಜೆ ಹೊರತುಪಡಿಸಿ ಬೇರೆ ಯಾರಿಗೆ ಬೇಕಾದ್ರೂ, ಸದಸ್ಯ ಸ್ಥಾನ ಕೊಡಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

ಬಿಎಸ್‍ವೈ ಚಿತ್ತ ಶೋಭಾರತ್ತ..!
ಬಿಜೆಪಿ ರಾಜ್ಯಾಧ್ಯಕ್ಷ ಐವರಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ನೀಡಲು ಚಿಂತನೆ ನಡೆಸಿದ್ದು, ಇದಕ್ಕೆ ಕೋರ್ ಕಮಿಟಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಬಿಎಸ್‍ವೈ ಅವರ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಎಸ್‍ವೈ, ಶೋಭಾ ಕರಂದ್ಲಾಜೆ ಬಿಟ್ಟು ಬೇರೆಯವರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಬಿಜೆಪಿಯ ಹಾಲಿ ಕೋರ್ ಕಮಿಟಿ ಸದಸ್ಯರು:
ಬಿ.ಎಸ್.ಯಡಿಯೂರಪ್ಪ
ಗೋವಿಂದ ಕಾರಜೋಳ
ಡಿ.ವಿ.ಸದಾನಂದಗೌಡ
ಪ್ರಹ್ಲಾದ್ ಜೋಶಿ
ನಳಿನ್‍ಕುಮಾರ್ ಕಟೀಲು
ಸಿ.ಎಂ.ಉದಾಸಿ
ಅನಂತಕುಮಾರ್ (ತೆರವಾಗಿರುವ ಸ್ಥಾನ)
ಅರವಿಂದ ಲಿಂಬಾವಳಿ
ಸಿ.ಟಿ.ರವಿ
ಕೆ.ಎಸ್.ಈಶ್ವರಪ್ಪ
ಮುರುಳೀಧರ್ ರಾವ್
ಆರ್.ಅಶೋಕ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ