ಬೆಂಗಳೂರು, ನ.16-ಶಿಕ್ಷಕರ ವರ್ಗಾವಣೆ, ಪ್ರಾಧ್ಯಾಪಕರ ನೇಮಕಾತಿ, ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಗೆ ತಕ್ಷಣವೇ ಬೇರೊಬ್ಬರನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಅವರನ್ನು ಬಿಜೆಪಿ ಒತ್ತಾಯಿಸಿದೆ.
ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶಿಕ್ಷಣ ಇಲಾಖೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಈ ಇಲಾಖೆಯು ಮುಖ್ಯಮಂತ್ರಿ ಅವರ ಬಳಿ ಇದ್ದರೂ ಅನಾಥ ಸ್ಥಿತಿಗೆ ತಲುಪಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಅರುಣ್ ಶಹಾಪುರ್ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಮುಖ್ಯಮಂತ್ರಿಗಳ ಬಳಿ ಸಾಕಷ್ಟು ಖಾತೆಗಳಿರುವುದರಿಂದ ಈ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಕರ ವರ್ಗಾವಣೆ ಈ ವರ್ಷ ಗೊಂದಲದ ಗೂಡಾಗಿದೆ. ಅನೇಕ ಸಮಸ್ಯೆಗಳು ಎದುರಿಗಿದ್ದರೂ ಅವುಗಳನ್ನು ಪರಿಹರಿಸುವವರೂ ಇಲ್ಲ. ಈ ಇಲಾಖೆ ಬಗ್ಗೆ ಏಕೆ ಇಷ್ಟೊಂದು ತಾತ್ಸಾರ ಮನೋಭಾವ ಎಂದು ಪ್ರಶ್ನಿಸಿದರು.
ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸುವಂತಹವರು ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿದ್ದಾರೆ. ಆದರೂ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇದನ್ನು ಇಟ್ಟುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈಗಾಗಲೇ ಶೈಕ್ಷಣಿಕ ಅವಧಿ ಪ್ರಾರಂಭವಾಗಿ ಹಲವು ತಿಂಗಳಾದರೂ ವರ್ಗಾವಣೆ ಪ್ರಕ್ರಿಯೆಯೇ ಆರಂಭಗೊಂಡಿಲ್ಲ. ನಿಮ್ಮ ಸರ್ಕಾರದಲ್ಲಿ ಇದನ್ನು ನಿಭಾಯಿಸುವವರು ಯಾರೂ ಇಲ್ಲವೇ ಎಂದು ಹರಿಹಾಯ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಪ್ರಭಾರಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಬಳಿ ಚರ್ಚೆ ಮಾಡಿದ್ದೆವು. ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಸಚಿವರು ಹೇಳಿದ್ದರು. ಆದರೂ ಈವರೆಗೂ ಈ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಸ ವಿಶ್ವವಿದ್ಯಾನಿಲಯ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಸರ್ಕಾರ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿಲ್ಲ. ಸಹಾಯಕ ಪ್ರಾಧ್ಯಾಪಕರ ಸಮಸ್ಯೆ ಹಾಗೆಯೇ ಉಳಿದಿದೆ. ಅತಿಥಿ ಉಪನ್ಯಾಸಕರ ಬಿಕ್ಕಟ್ಟು ಮುಂದುವರೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲು ಸಮಯಾವಕಾಶ ಕೇಳಿದರೂ ನಮಗೆ ಅವಕಾಶ ನೀಡಿಲ್ಲ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಿದ್ದೇವೆ ಎಂದು ಅರುಣ್ ಶಹಾಪುರ ತಿಳಿಸಿದರು.