ಬೆಂಗಳೂರು, ನ.15- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯಂತ ಸಾವಿರ ಜನ ಬಂದರೂ ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡುವುದಿರಲಿ ಅದರ ಬುಡವನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಎಚ್ಚರಿಸಿದ್ದಾರೆ.
ನಿಮ್ಮ ಮುತ್ತಾತ, ತಾತಾ, ಅಪ್ಪ, ಅಮ್ಮನಿಂದಲೇ ಆರ್‍ಎಸ್‍ಎಸ್ ನಿಷೇಧಿಸುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ದೇಶದೆಲ್ಲೆಡೆ ಸೋತು ಸುಣ್ಣವಾಗಿರುವ ನಿಮ್ಮಿಂದ ಅದು ಸಾಧ್ಯವಿಲ್ಲ. ಅದು ಆರ್‍ಎಸ್‍ಎಸ್ ನಿಷೇಧ ಮಾಡುವುದು ಎಂದರೆ ಕಡ್ಲೆಪುರಿ ತಿಂದಂಗೂ ಅಲ್ಲ, ಕಾಂಗ್ರೆಸ್ ಗಿಡ ಕಿತ್ತಾಂಗೂ ಅಲ್ಲ ಎಂದು ಅವರು ಕುಹುಕವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‍ಎಸ್‍ಎಸ್ ನಿಷೇಧ ಮಾಡುವುದಾಗಿ ಹೇಳಿರುವುದು ಅಪಹಾಸ್ಯ ಮಾಡಿದಂತೆ. ಹಿಂದೆ ಪಂಡಿತ್ ಜವಹರಲಾಲ್ ನೆಹರು ಅವರು ನಿಷೇಧ ಮಾಡಿದಾಗ ಸರ್ವೋಚ್ಚ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿತ್ತು. ನ್ಯಾಯಾಲಯದ ತೀರ್ಪನ್ನು ಕೂಡ ನೆಹರು ಒಪ್ಪಿಕೊಳ್ಳಲು ಮುಂದಾಗದಿದ್ದಾಗ ಜನಾಭಿಪ್ರಾಯದ ಮೂಲಕ ಹೋರಾಟ ಮಾಡಲಾಯಿತು. ಅಂತಹವರಿಂದಲೇ ಆಗದಿದ್ದದ್ದು ರಾಹುಲ್‍ಗಾಂಧಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಯಾವ ಕಾರಣಕ್ಕಾಗಿ ಆರ್‍ಎಸ್‍ಎಸ್ ನಿಷೇಧ ಮಾಡುತ್ತೇನೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ನೆರೆ, ಭೂಕುಂಪ ಸೇರಿದಂತೆ ಎಲ್ಲೆಲ್ಲಿ ವಿಪತ್ತುಗಳು ಸಂಭವಿಸಿದಾಗ ಆರ್‍ಎಸ್‍ಎಸ್ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಭಾರತ-ಚೀನ ನಡುವೆ ಯುದ್ಧ ನಡೆದಾಗ ಆರ್‍ಎಸ್‍ಎಸ್ ಪರಿಶ್ರಮ ನೆನೆದು 1953ರ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದನ್ನು ಮರೆತುಬಿಟ್ಟಿದ್ದೀರಾ ಎಂದು ಮರು ಪ್ರಶ್ನಿಸಿದರು.
ಅನುಭವ ಪಾಠ ಕಲಿಸಬೇಕು. ಸಾಲು ಸಾಲು ಚುನಾವಣೆಗಳಲ್ಲಿ ಸೋತು ಒಂದೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನಿಮಗೆ ಇನ್ನೂ ಬುದ್ದಿ ಬಂದಿಲ್ಲ ಎಂದರೆ ಯಾರು ಏನು ಮಾಡಲು ಸಾಧ್ಯವಿಲ್ಲ. ಮೊದಲು ಇಟಲಿಯ ಕನ್ನಡಕವನ್ನು ತೆಗೆದು ಆರ್‍ಎಸ್‍ಎಸ್ ಮತ್ತು ಅದರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಿ ಎಂದು ರವಿ ಒತ್ತಾಯಿಸಿದರು.
ಹಣ ಬಿಡುಗಡೆಗೆ ಒತ್ತಾಯ:
ರಾಜ್ಯದ 100 ತಾಲ್ಲೂಕುಗಳನ್ನು ಸರ್ಕಾರವೇ ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಿದೆ. ಇದಕ್ಕೆ ಹೆಚ್ಚುವರಿಯಾಗಿ ಇನ್ನೂ 45 ತಾಲ್ಲೂಕುಗಳನ್ನೂ ಸಹ ಸೇರ್ಪಡೆ ಮಾಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಸರ್ಕಾರದವತಿಯಿಂದ ತಕ್ಷಣವೇ ಬರ ಕಾಮಗಾರಿ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಬರಪೀಡಿತ ತಾಲ್ಲೂಕುಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದೆ ಜನರು ಗುಳೆ ಹೋಗುವಂತಾಗಿದೆ. ಕೂಡಲೇ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬರ ಪೀಡಿತ ತಾಲ್ಲೂಕುಗಳಲ್ಲಿ ಕಾಮಗಾರಿ ಕೈಗೊಳ್ಳಲು ಹಣ ಬಿಡಗುಡೆ ಮಾಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವ ಇಲಾಖೆಗೂ ಕೂಡ ಸರ್ಕಾರ ಒಂದೇ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಕ್ಷಣ ಅಧಿಕಾರಿಗಳ ಸಭೆ ನಡೆಸಬೇಕೆಂದು ಮನವಿ ಮಾಡಿದರು.
ಈ ಹಿಂದೆ ನೈಸ್ ರಸ್ತೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅಂದು ವಿರೋಧ ಪಕ್ಷದಲ್ಲಿದ್ದ ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಯೋಜನೆ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ್ದರು. ಯೋಜನೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ರಚನೆ ಮಾಡಿ ವರದಿಯನ್ನೂ ಮಂಡಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಇನ್ನು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕ್ತಾರರಾದ ಅಶ್ವಥನಾರಾಯಣ್, ಎ.ಎಚ್.ಆನಂದ್, ಪ್ರಕಾಶ್ ಉಪಸ್ಥಿತರಿದ್ದರು.