ಟಿಡಿಎಸ್ ತಡವಾಗಿ ಸಂದಾಯ ಮಾಡುವಾಗ ವಿಧಿಸುವ ದಂಡದ ಪುನರ್ ಪರಿಶೀಲಿಸಿ, ಕಾಯ್ದೆಗೆ ತಿದ್ದುಪಡಿ ತರಲು ಸಿಬಿಡಿಟಿಗೆ ಕೋರಿಕೆ

ಬೆಂಗಳೂರು, ನ.14- ಟಿಡಿಎಸ್ ಸಂದಾಯ ಮಾಡುವಾಗ ತಡವಾದರೆ ವಿಧಿಸುವ ದಂಡವನ್ನು ಪುನರ್ ಪರಿಶೀಲಿಸಿ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲು ಸಿಬಿಡಿಟಿ ಕೇಂದ್ರ ಮಂಡಳಿಗೆ ಕೋರಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ (ಟಿಡಿಎಸ್) ಸಂಜಯ್‍ಕುಮಾರ್ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂಲದಲ್ಲಿ ತೆರಿಗೆ ಕಡಿತ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಕಾಸಿಯಾದ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಅವರ ಮನವಿಗೆ ಸ್ಪಂದಿಸಿದ ಅವರು, ಕಾಯ್ದೆಗೆ ತಿದ್ದುಪಡಿ ತರಲು ಸಿಬಿಡಿಟಿ ಕೇಂದ್ರ ಮಂಡಳಿಗೆ ಕೋರಲಾಗಿದೆ ಎಂದು ಹೇಳಿದರು.

ಒಟ್ಟು ವರಮಾನದಲ್ಲಿ ಟಿಡಿಎಸ್ ಶೇ.40ರಷ್ಟು ಕರ್ನಾಟಕ ರಾಜ್ಯದಲ್ಲಿ ಸಂದಾಯ ಮಾಡಿರುವುದು ಶ್ಲಾಘನೀಯ.ಈ ಜಾಗೃತಿ ಕಾರ್ಯಕ್ರಮದಲ್ಲಿ ಟಿಡಿಎಸ್ ಕಾಯ್ದೆ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸ ಎಂದರಲ್ಲದೆ, ಇದರ ಸಾಧಕ-ಬಾಧಕಗಳ ಬಗ್ಗೆ ತಿಳಿಸಿಕೊಟ್ಟರು.

ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಮಾತನಾಡಿ, ಮೂರು ತಿಂಗಳಿಗೊಮ್ಮೆ ರಿಟರ್ನ್ ಫೈಲ್ ಸಲ್ಲಿಸುವಾಗ ತಡವಾದರೆ ದಿನಕ್ಕೆ 200ರೂ.ದಂಡವನ್ನು ವಿಧಿಸಲಾಗುತ್ತಿದೆ.ಪ್ರತಿ ತಿಂಗಳು 7ನೇ ತಾರೀಖಿನೊಳಗೆ ಟಿಡಿಎಸ್ ಪಾವತಿಸಲಾಗುತ್ತದೆ.ತಡವಾದ ಅವಧಿಗೆ ಪ್ರತಿ ತಿಂಗಳು ಶೇ.1.05ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಬಡ್ಡಿ ವಿಧಿಸುವುದರ ಜತೆಗೆ ದಂಡ ವಸೂಲಿ ಮಾಡುತ್ತಿರುವುದು ಸಮಂಜಸವಲ್ಲ. ಇದರಿಂದ ಕೈಗಾರಿಕೆಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನು ಪುನರ್ ಪರಿಶೀಲಿಸಬೇಕೆಂದೂ, ಕನಿಷ್ಠ ಪ್ರಮಾಣದ ದಂಡ ವಿಧಿಸುವಂತಿರಬೇಕೆಂದು ಮನವಿ ಮಾಡಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಟಿಡಿಎಸ್ ಅಳವಡಿಕೆ ಕುರಿತಂತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಡಾ.ವೆಂಕಟೇಶ್ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರೆ, ಜಂಟಿ ಆಯುಕ್ತ ಡಾ.ವಿನೋದ್ ಶರ್ಮಾ ಟಿಡಿಎಸ್ ಜಾಗೃತಿ ಕುರಿತು ಮಾತನಾಡಿದರು.
ಆದಾಯ ತೆರಿಗೆ ಅಧಿಕಾರಿ ಸಿ.ಬಿ.ಪ್ರಭಾಣ್ಣಗೌಡ, ಕಾಸಿಯಾ ಪದಾಧಿಕಾರಿಗಳಾದ ಆರ್.ರಾಜು, ಸುರೇಶ್ ಎನ್.ಸಾಗರ್, ವಿಶ್ವೇಶ್ವರಯ್ಯ, ಶ್ರೀನಾಥ್ ಭಂಡಾರಿ ಉದ್ಯಾವರ್, ಟಿ.ಎಸ್.ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ 17 ಮತ್ತು 18ರಂದು ಕನಕಪುರದ ದೇಗುಲ ಮಠದ ನಿರಂಜನ ಚರಪಟ್ಟಾಧಿಕಾರ ಮತ್ತು ಬಸವಜಯಂತಿ ನಡೆಯಲಿದೆ:
ಬೆಂಗಳೂರು, ನ.14-ಕನಕಪುರದ ಶ್ರೀ ದೇಗುಲ ಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಹಾಗೂ ಬಸವಜಯಂತಿ ಕಾರ್ಯಕ್ರಮವು ಇದೇ 17 ಮತ್ತು 18ರಂದು ಮಠದ ಶ್ರೀ ನಿರ್ವಾಣೇಶ್ವರ ಮಹಾ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಶ್ರೀ ದೇಗುಲ ಮಠವು ಅಲ್ಲಮ ಪ್ರಭುಗಳ ಶೂನ್ಯಪರಂಪರೆಯ ಮಠವಾಗಿದ್ದು, ಇದಕ್ಕೆ ಸುಮಾರು 650 ವರ್ಷಗಳ ಇತಿಹಾಸವಿದೆ. ಆದಿ ನಿರ್ವಾಣ ಸ್ವಾಮೀಗಳಿಂದ ಆರಂಭವಾದ ಈ ಮಠವು, ತ್ರಿವಿಧ ದಾಸೋಹವನ್ನು ನಿರ್ವಹಿಸುತ್ತಾ ಬಂದಿದ್ದು, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.

ನ.17ರಂದು ತುಮಕೂರಿನ ಸಿದ್ದಗಂಗಾಮಠದ ಶ್ರೀಗಳು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಗಳು, ಶಿವಮೊಗ್ಗದ ಬೆಕ್ಕಿನ ಕಲ್ಮಠ, ಧಾರವಾಡದ ಮುರುಘಾ ಮಠ ಸೇರಿದಂತೆ ಇತರೆ ಮಠಗಳ ಮಠಾಧಿಪತಿಗಳು ಸಾನ್ನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎಚ್.ಡಿ.ರೇವಣ್ಣ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದು, ಸಚಿವರಾದ ಪುಟ್ಟರಂಗಶೆಟ್ಟಿ, ಸಂಸದರಾದ ಡಿ.ಕೆ.ಸುರೇಶ್, ಪ್ರತಾಪ್‍ಸಿಂಹ ಮತ್ತಿತರರು ಭಾಗಹಿಸಲಿದ್ದಾರೆ ಎಂದರು.

ನ.18ರಂದು ಬೆಳಗ್ಗೆ 8 ಗಂಟೆಗೆ ಕನಕಪುರ ಟೌನ್‍ನಲ್ಲಿ ಶ್ರೀಗಳ ಪಲ್ಲಕಿ ಉತ್ಸವ ಜರುಗಲಿದ್ದು, 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದೆ.ಸುತ್ತೂರು ಮಠ, ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಚಿತ್ರದುರ್ಗ ಮಠ, ನೊಣವಿನಕೆರೆ ಮಠ, ದೇವನೂರು ಮಠ ಸೇರಿದಂತೆ ಮತ್ತಿತರ ಮಠಾಧಿಪತಿಗಳು ಸಾನ್ನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೇಗುಲ ಪ್ರಭೆ ಎಂಬ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸಾವಿರಾರು ಹಿರಿಯ ವಿದ್ಯಾರ್ಥಿಗಳು, 300ಕ್ಕೂ ಹೆಚ್ಚು ಪೂಜ್ಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ