ಬೆಂಗಳೂರು, ನ.12-ರಾಜ್ಯ ಬಿಜೆಪಿಯೊಳಗೆ ಬಿ.ಎಸ್.ಯಡಿಯೂರಪ್ಪ , ಅನಂತ್ ಕುಮಾರ್ ಹಾಗೂ ಕೆ.ಎಸ್.ಈಶ್ವರಪ್ಪ ಅವರನ್ನು ಸೆಟ್ ದೋಸೆ ಎಂದೇ ಕೆಳ ಹಂತದ ನಾಯಕರು ಕರೆಯುತ್ತಿದ್ದರು.
ಮೂವರು ನಾಯಕರ ನಡುವೆ ವ್ಯಕ್ತಿಗತವಾಗಿ ಎಷ್ಟೇ ಭಿನ್ನಾಭಿಪ್ರಾಯ, ಮನಸ್ತಾಪ, ಪರಸ್ಪರ ಮುಖಕೊಟ್ಟು ಮಾತನಾಡದಷ್ಟು ಅಭಿಪ್ರಾಯ ಭೇದವಿದ್ದರೂ ಹೊರಗಡೆ ಮಾತ್ರ ಅಣ್ಣ ತಮ್ಮಂದಿರಂತೆ ವರ್ತಿಸುತ್ತಿದ್ದರು. ಹೀಗಾಗಿಯೇ ಮೂವರು ನಾಯಕರನ್ನು ಪಕ್ಷದಲ್ಲಿ ಸೆಟ್ ದೋಸೆ ಎಂದೇ ತಮಾಷೆ ಮಾಡುತ್ತಿದ್ದರು.
ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕಾರಣಕ್ಕಾಗಿ ನಮ್ಮ ನಡುವೆ ಏನೂ ಇಲ್ಲ ಎಂಬಂತೆ ವರ್ತಿಸುತ್ತಿದ್ದರು.
ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗಲೂ ಅವರ ವಿರುದ್ಧ ಒಂದೇ ಒಂದು ಪದವನ್ನು ಲಘುವಾಗಿ ಮಾತನಾಡದೆ ಸೌಜನ್ಯದಿಂದಲೇ ನಡೆದುಕೊಂಡಿದ್ದರು ಅನಂತ್‍ಕುಮಾರ್.
ಬಹುತೇಕ ಕಾರ್ಯಕರ್ತರು ಈ ಮೂವರನ್ನು ಹೆಸರಿನಿಂದ ಕರೆಯುವ ಬದಲು ಸೆಟ್ ದೋಸೆ ಎಂದು ಆಡಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಈ ಮೂವರ ನಡುವೆ ಬಾಂಧವ್ಯವಿತ್ತು.