ಯಾರಿಗೂ ನೋವು ಕೊಡಬಾರದೆಂಬ ಮನೋಭಾವವೇ ಅನಂತ್ ಕುಮಾರ್ ಗೆ ಮುಳುವಾಯಿತೇ ?

ಬೆಂಗಳೂರು, ನ.12-ಜೀವನದುದ್ದಕ್ಕೂ ಯಾರಿಗೂ ನೋವು ಕೊಡಬಾರದು ಎಂದು ಮನೋಭಾವವೇ ಅನಂತ್ ಕುಮಾರ್ ಅವರಿಗೆ ಮುಳುವಾಯಿತೇ ?
ಹೌದು ಎನ್ನುತ್ತಿವೆ ಆಪ್ತ ಮೂಲಗಳು. ಅನಂತ್ ಕುಮಾರ್ ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ರೋಗ ಇರುವುದು ಪತ್ತೆಯಾಗಿತ್ತು. ಆದರೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕುಟುಂಬ ವರ್ಗ ಆಘಾತಕ್ಕೆ ಒಳಗಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಯಾರ ಬಳಿಯೂ ಈ ವಿಷಯವನ್ನು ಹೇಳಿಕೊಂಡಿರಲಿಲ್ಲ.

ತಂದೆ ನಾರಾಯಣಶಾಸ್ತ್ರಿ, ತಾಯಿ ಗಿರಿಜಾ ದಂಪತಿ ಹೇಳಿಕೊಟ್ಟಿದ್ದ ಹಿತನುಡಿಗಳನ್ನು ಅನಂತ್ ಕುಮಾರ್ ಅಕ್ಷರಶಃ ಪಾಲಿಸುತ್ತಿದ್ದರು. ಜೀವನದಲ್ಲಿ ನಮಗೆ ಒಬ್ಬರು ಸಹಾಯ ಮಾಡಲು ಸಾಧ್ಯವಾಗದಿದ್ದರೂ ಇನ್ನೊಬ್ಬರ ಮನಸ್ಸಿಗೆ ನೋವು ಕೊಡುವ ಕೆಲಸವನ್ನು ಮಾಡಬಾರದು ಎಂಬ ಸಲಹೆಯನ್ನು ತಾಯಿ ನೀಡಿದ್ದರು.

ಇದನ್ನು ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಪಾಲಿಸಿಕೊಂಡಿದ್ದ ಅನಂತ್ ಕುಮಾರ್, ತಮಗೆ ಎಷ್ಟೇ ನೋವು, ಸಂಕಟ ಬಂದರೂ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಪತ್ನಿ ತೇಜಸ್ವಿನಿ, ಪುತ್ರಿಯರು ಸೇರಿದಂತೆ ಕುಟುಂಬ ವರ್ಗದವರಿಗೂ ಒಂದೇ ಒಂದು ಸಣ್ಣ ಸುಳಿವನ್ನೂ ಕೂಡ ಮೊದಲು ನೀಡಿರಲಿಲ್ಲ.
ರಾಷ್ಟ್ರ ಸೇವೆಗಾಗಿ ಸದಾ ಹಂಬಲಿಸುತ್ತಿದ್ದ ಅನಂತ್ ಕುಮಾರ್ ಅವರ ಅರೋಗ್ಯ ಕ್ಷೀಣಿಸುತ್ತಿರುವ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಾಗ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು. ಆದರೆ ಎನ್‍ಡಿಎ ಸರ್ಕಾರದ ವಿರುದ್ಧ ಟಿಡಿಪಿ ಸಂಸತ್‍ನಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಿದಾಗ ವಿದೇಶಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟರು.

ಸರ್ಕಾರ ಏನಾಗಲಿದೆಯೋ ಎಂಬ ಆತಂಕ ಒಂದೆಡೆಯಾದರೆ, ಸಂಸತ್‍ನ ಉಭಯ ಸದನಗಳನ್ನು ನಿರ್ವಹಣೆ ಮಾಡಬೇಕಾದ ಜವಾಬ್ದಾರಿಯೂ ಅವರ ಮೇಲಿತ್ತು. ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದರಿಂದ ಇಂತಹ ಸಂದರ್ಭದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ನರೇಂದ್ರ ಮೋದಿ ಹಾಗೂ ಅಮಿತ್ ಷಾ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರೂ ಮೊದಲು ಅವಿಶ್ವಾಸ ಎಂಬ ಅಗ್ನಿ ಪರೀಕ್ಷೆಯನ್ನು ಎದುರಿಸಿ ನಂತರವೇ ಚಿಕಿತ್ಸೆಗೆ ಹೋಗುವುದಾಗಿ ಖುದ್ದು ಪ್ರಧಾನಿಗೆ ಹೇಳಿದ್ದರು ಎಂದು ತಿಳಿದುಬಂದಿದೆ.

ಯಾವಾಗ ಅವಿಶ್ವಾಸ ನಿರ್ಣಯದಲ್ಲಿ ಎನ್‍ಡಿಎ ಸರ್ಕಾರ ಗೆಲುವು ಸಾಧಿಸಿತೋ ತಕ್ಷಣವೇ ಅನಂತ್ ಕುಮಾರ್ ಲಂಡನ್‍ಗೆ ತೆರಳಿದರು. ಅವರ ಆರೋಗ್ಯದ ಬಗ್ಗೆ ಕೆಲವು ಸಂದರ್ಭಗಳಲ್ಲಿ ಊಹಾಪೆÇೀಹಗಳು ಕೇಳಿಬಂದಿದ್ದವು. ಅವು ಅಷ್ಟೇ ಬೇಗನೆ ಮರೆಯಾಗುತ್ತಿದ್ದವು. ಏಕೆಂದರೆ ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಳ್ಳುವ ಪರಿಪಾಠವನ್ನು ಅವರು ಬೆಳೆಸಿಕೊಂಡಿದರು.
ತಮ್ಮ ಆಕರ್ಷಿತ ಭಾಷಣಗಳಲ್ಲೆ ಜನರನ್ನು ಸೆಳೆಯುವ ಸಾಮಥ್ರ್ಯ ಹೊಂದಿದ್ದ ಅನಂತ್ ಕುಮಾರ್, ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ