ಬೆಂಗಳೂರು, ನ.10- ನಗರದ ಮೂರು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮೂರು ಮನೆಗಳ್ಳತನ ನಡೆಸಿರುವ ಕಳ್ಳರು ಹಣ-ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿನಗರ: ನಾಗರಬಾವಿಯ ವಿನಾಯಕ ಲೇಔಟ್ನಲ್ಲಿ ವಾಸವಿರುವ ಸಾಫ್ಟ್ವೇರ್ ಎಂಜಿನಿಯರ್ ಅರುಣ್ ಎಂಬುವವರು ನಿನ್ನೆ ಮಧ್ಯಾಹ್ನ ಹೊರಗೆ ಹೋಗಿದ್ದಾಗ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ 760 ಗ್ರಾಂ ಚಿನ್ನದ ಆಭರಣ ಹಾಗೂ 3 ಲಕ್ಷ ಹಣವನ್ನು ಕಳ್ಳತನ ಮಾಡಿದ್ದಾರೆ.
ಅರುಣ್ ಅವರು ರಾತ್ರಿ 9 ಗಂಟೆಗೆ ವಾಪಸಾದಾಗ ಮನೆಗಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಜಯನಗರ: ಜಯನಗರ 8ನೆ ಬ್ಲಾಕ್, 46ನೆ ಕ್ರಾಸ್ ನಿವಾಸಿ ಲಾಜಿಯಾ ಎಂಬುವವರು ನಿನ್ನೆ ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾಗ ಕಳ್ಳರು ಕಿಟಕಿಯ ಗ್ರಿಲ್ ಮುರಿದು ಒಳನುಸುಳಿ 1.40 ಲಕ್ಷ ಬೆಲೆಯ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಲಾಜಿಯಾ ಅವರು ರಾತ್ರಿ ವಾಪಸಾದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರ: ಇಲ್ಲಿನ ಎರಡನೆ ಎಫ್ ಕ್ರಾಸ್, 11ನೆ ಮುಖ್ಯರಸ್ತೆಯ ವಿನಾಯಕ ಪಾರ್ಕ್ ಸಮೀಪದ ನಿವಾಸಿ ರಾಜೇಶ್ವರಿದೇವಿ ಎಂಬುವವರು ಕಾರ್ಯನಿಮಿತ್ತ ನಿನ್ನೆ ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾಗ ಕಳ್ಳರು ಇವರ ಮನೆಯ ಬೀಗ ಮುರಿದು ಒಳನುಗ್ಗಿ ಬೀರುವನ್ನು ಒಡೆದು 300 ಗ್ರಾಂ ಆಭರಣ ಹಾಗೂ 3 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ.
ರಾಜೇಶ್ವರಿದೇವಿ ರಾತ್ರಿ 11 ಗಂಟೆಗೆ ಮನೆಗೆ ವಾಪಸಾದಾಗಲೇ ಕಳ್ಳತನ ನಡೆದಿರುವುದು ಕಂಡುಬಂದಿದೆ.
ಈ ಮೂರೂ ಪ್ರಕರಣಗಳನ್ನು ಆಯಾಯ ಠಾಣೆ ಪೊಲೀಸರು ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.