ಉಪಚುನಾವಣೆ ಫಲಿತಾಂಶ: ಮೈತ್ರಿ ಕೂಟಕ್ಕೆ ಜನತೆ ಬೆಂಬಲ

ಬೆಂಗಳೂರು, ನ.6-ಜಾತ್ಯತೀತ ಮತಗಳ ವಿಭಜನೆಯನ್ನು ತಪ್ಪಿಸಿ ಬಿಜೆಪಿಯನ್ನು ಸೋಲಿಸಬೇಕೆಂದು ಒಟ್ಟುಗೂಡಿದ್ದ ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿಕೂಟ ಉಪಚುನಾವಣೆ ಫಲಿತಾಂಶದಿಂದ ಮತ್ತಷ್ಟು ಗಟ್ಟಿಯಾಗಿದೆ.

2019ರ ಲೋಕಸಭೆ ಮಹಾಸಮರಕ್ಕೂ ಮೊದಲು ನಡೆದ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಮುಂದುವರೆಯಬೇಕು ಎಂಬ ಸಂದೇಶ ನೀಡಿದಂತಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯ ರಾಜಕಾರಣದಲ್ಲಿ 1999 ರಿಂದಲೂ ಪರಸ್ಪರ ಎದುರಾಳಿಗಳಾಗಿ ಸೆಣಸಾಡುತ್ತಿದ್ದವು. ಅದಕ್ಕೂ ಮೊದಲು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಜನತಾ ಪರಿವಾರದ ನಾಯಕರು ಕಾಂಗ್ರೆಸ್ ವಿರುದ್ಧ ತಮ್ಮ ಸೈದ್ಧಾಂತಿಕ ಹೋರಾಟವನ್ನು ನಿರಂತರವಾಗಿ ಮುಂದುವರೆಸಿದರು.

ಸಿದ್ಧಾಂತದ ಆಧಾರದ ಮೇಲೆ ರಾಜಕಾರಣವನ್ನು ವಿಶ್ಲೇಷಿಸುವುದಾದರೆ ಜೆಡಿಎಸ್‍ಗೆ ಕಾಂಗ್ರೆಸ್‍ಗಿಂತಲೂ ಬಿಜೆಪಿ ದೊಡ್ಡ ಶತ್ರುವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಜಾತ್ಯಾತೀತತೆಯ ನಿಲುವಿನ ವಿಷಯ ಬಂದಾಗ ಸಮಾನ ಮನಸ್ಕ ಪಕ್ಷಗಳಾಗಿದ್ದವು. ಆದರೆ ಹಳೇ ಮೈಸೂರು ಭಾಗದಲ್ಲಿ ಈ ಎರಡೂ ಪಕ್ಷಗಳ ನಡುವೆಯೇ ಪ್ರಬಲ ಪೈಪೆÇೀಟಿ ಇತ್ತು.

2006ರ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದರು. ಆ ದಿನಗಳಲ್ಲಿ ಜೆಡಿಎಸ್‍ನ ಜಾತ್ಯತೀತತೆಯ ಮಡಿವಂತಿಕೆ ಪ್ರಶ್ನೆಗೊಳಗಾಗಿತ್ತು. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ದಿಟ್ಟ ನಿಲುವಿನಿಂದ ವ್ರತ ಭಂಗವಾಗದಂತೆ ಎಚ್ಚರ ವಹಿಸಿದ್ದರು.

ಜಾತ್ಯತೀತತೆಯ ಸರಳನ್ನು ಸಡಿಲಗೊಳ್ಳಲು ಬಿಡದೆ, ಸೋಲು-ಗೆಲುವನ್ನು ಲೆಕ್ಕಕ್ಕಿಟ್ಟುಕೊಳ್ಳದೆ ಅಚಲವಾದ ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ತಮ್ಮ ರಾಜಕೀಯ ದಾಯಾದಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದಾಗಲೂ ಈಷ್ರ್ಯೆಗೆ ಒಳಗಾಗದೆ ದೇವೇಗೌಡರು ತಮ್ಮ ಜಾತ್ಯತೀತ ನಿಲುವನ್ನು ಸಡಿಲಗೊಳ್ಳಲು ಬಿಡಲಿಲ್ಲ.
2018ರ ಚುನಾವಣೆಯಲ್ಲಿ ಮತ್ತೊಮ್ಮೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳು ಪರಸ್ಪರ ಸೆಣಸಾಡಿದವು. ಕಾಂಗ್ರೆಸ್ ಶೇ.38.14 ರಷ್ಟು, ಬಿಜೆಪಿ ಶೇ.36.34ರಷ್ಟು, ಜೆಡಿಎಸ್ ಶೇ.18.3ರಷ್ಟು ಮತ ಗಳಿಸಿದ್ದವು.

ಮತ ಗಳಿಕೆಯಲ್ಲಿ ಕಾಂಗ್ರೆಸ್ ಮುಂದೆಯೇ ಇದ್ದರೂ ಹೆಚ್ಚು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿತ್ತು. ಕಾಂಗ್ರೆಸ್-ಜೆಡಿಎಸ್‍ನ ಎರಡೂ ಪಕ್ಷಗಳ ಮತ ಹಂಚಿಕೆಯನ್ನು ಕೂಡಿಸಿದರೆ ಶೇ.56.44ರಷ್ಟು ಜನ ಜಾತ್ಯತೀತ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಅಂದಾಜುಗಳು ಕೇಳಿ ಬಂದಿದ್ದವು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅತಿ ಹೆಚ್ಚು ಪ್ರಬಲವಾಗಿ ಬೆಳೆಯುತ್ತಿರುವುದು ಕರ್ನಾಟಕ ರಾಜಕಾರಣದಲ್ಲಿ ನುಂಗಲಾರದ ತುತ್ತಾಗಿತ್ತು. ಶತಾಯಗತಾಯ ಬಿಜೆಪಿಯನ್ನು ಮಣಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಬೇಷರತ್ತಾಗಿ ಒಂದುಗೂಡಿದವು.
ಮೈತ್ರಿಯನ್ನು ಕೇವಲ ಸರ್ಕಾರಕ್ಕಷ್ಟೇ ವಿಸ್ತರಣೆ ಮಾಡದೆ ಚುನಾವಣೆಗೂ ವಿಸ್ತರಣೆ ಮಾಡುವುದಾಗಿ ಆ ಕ್ಷಣವೇ ಘೋಷಿಸಿದವು. ಇದು ರಾಜಕೀಯವಾಗಿ ಪರ-ವಿರೋಧ ವ್ಯಾಖ್ಯಾನಕ್ಕೆ ಒಳಗಾಯಿತು.

ಕಾಂಗ್ರೆಸ್‍ಗೆ ಮತ ಹಾಕಲು ಇಷ್ಟವಿಲ್ಲದೆ ಇರುವ ಶೇಕಡ ಮೂರ್ನಾಲ್ಕರಷ್ಟು ಮಂದಿ ಜೆಡಿಎಸ್‍ಗೆ ಮತ ಹಾಕುತ್ತಿದ್ದರು. ಈಗ ಜೆಡಿಎಸ್ ಕೂಡ ಕಾಂಗ್ರೆಸ್ ಜೊತೆ ಸೇರಿರುವುದರಿಂದ ಆ ಮತಗಳು ಬಿಜೆಪಿಯ ಪಾಲಾಗಲಿವೆ ಇದು ದೋಸ್ತಿ ಪಕ್ಷಗಳಿಗೆ ಹಿನ್ನಡೆಯಾಗಲಿವೆ ಎಂಬ ವಿಶ್ಲೇಷಣೆಗಳಿತ್ತು.
ಆದರೆ ಎಲ್ಲಾ ಲೆಕ್ಕಾಚಾರಗಳನ್ನು ಉಪಚುನಾವಣೆ ಫಲಿತಾಂಶ ಸ್ಪಷ್ಟವಾಗಿ ಜನರ ಮುಂದಿಟ್ಟಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಅಂದಾಜುಗಳು ಕರಾರುವಕ್ಕಾಗಿ ಕೆಲಸ ಮಾಡಿವೆ. ಮಂಡ್ಯ, ರಾಮನಗರ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲದೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ವಿಜೃಂಭಣೆಯ ಗೆಲುವು ಸಾಧಿಸಿದೆ.

ಬಳ್ಳಾರಿ ಲೋಕಸಭೆ ಭದ್ರಕೋಟೆಯನ್ನು ಭೇದಿಸಿ, ಜಮಖಂಡಿ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ತನ್ನ ಪಕ್ಷದ ಉಕ್ಕಿನ ಕೋಟೆಯಾಗಿದ್ದ ಶಿವಮೊಗ್ಗವನ್ನು ಉಳಿಸಿಕೊಳ್ಳಲು ಬಿಜೆಪಿ ಪರದಾಡುವಂತಾಗಿದೆ. ಈ ಚುನಾವಣೆ ಫಲಿತಾಂಶ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿಕೂಟಕ್ಕೆ ದೀಪಾವಳಿ ಕೊಡುಗೆ ನೀಡಿದ್ದಷ್ಟಲ್ಲದೆ ರಾಜ್ಯ ರಾಜಕಾರಣದ ದಿಕ್ಕಿಗೂ ಸ್ಪಷ್ಟ ದಾರಿ ತೋರಿಸಿದೆ.
ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಫಲ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ