ಬೆಂಗಳೂರು, ನ.5-ಬಿಜೆಪಿಯವರು ಟಿಪ್ಪು ಜಯಂತಿಯನ್ನು ಏಕೆ ವಿರೋಧಿಸುತ್ತಿದ್ದಾರೆ. ಅದಕ್ಕೆ ಸರಿಯಾದ ಕಾರಣ ಕೊಡಿ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಇಂದಿಲ್ಲಿ ತಿಳಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ದೇಶ ಕಂಡ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಹೋರಾಟದ ಮೊದಲ ನಾಯಕ. ಅವರ ಬಗ್ಗೆ ಇದೇ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಹಾಡಿ, ಹೊಗಳಿದ್ದಾರೆ. ಈಗ ಟಿಪ್ಪು ಜಯಂತಿಯನ್ನು ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ, ಜಗದೀಶ್ಶೆಟ್ಟರ್ ಅವರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಕೆಜೆಪಿಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಅವರು ಟಿಪ್ಪು ಜಯಂತಿ ಆಚರಣೆಯನ್ನು ಬೆಂಬಲಿಸಿದ್ದರು. ಅಂದು ಟಿಪ್ಪು ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದವರು ಇಂದೇಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ರಾಜಕೀಯ ಹಾಗೂ ಚುನಾವಣೆ ಹತ್ತಿರವಿದೆ ಎಂಬ ಕಾರಣಕ್ಕೆ ಜನರನ್ನು ದಾರಿ ತಪ್ಪಿಸಬಾರದು. ನಮ್ಮ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದೆ. ಈ ಹಿಂದಿನ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದಿತ್ತು. ಅದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ವಿರೋಧಿಸುವುದಾದರೆ ಸರಿಯಾದ ಕಾರಣ ಕೊಡಿ ಎಂದು ಹೇಳಿದರು.
ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭಾರತೀಯ ಮುಸ್ಲಿಮರು ವಿರೋಧಿಸುತ್ತಿಲ್ಲ. ಅಲ್ಲಿ ರಾಮಮಂದಿರ ಕಟ್ಟಿ ಹೊಡೆದು ಹಾಕಿರುವ ಮಸೀದಿಯನ್ನೂ ಕಟ್ಟಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.