ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಟಿಬೆಟಿಯನ್ನರ ಸಂಸದರ ನಿಯೋಗ

ಬೆಂಗಳೂರು, ನ.5-ಟಿಬೆಟಿಯನ್ನರ ಸಂಸದರ ನಿಯೋಗ ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಸದಾಶಿವನಗರದ ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಟಿಬೆಟಿಯನ್ನರ ಸಂಸದರ ನಿಯೋಗ ಅಂತಾರಾಷ್ಟ್ರೀಯ ಸ್ನೇಹಸಂಬಂಧ ಕಾಯ್ದೆಯನ್ನು ಟಿಬೆಟಿಯನ್ನರಿಗೆ ಪೂರಕವಾಗಿ ತಿದ್ದುಪಡಿ ಮಾಡುವ ಮೂಲಕ ನೆರವಾಗುವಂತೆ ಕೋರಿತು.
ತಿದ್ದುಪಡಿ ಒತ್ತಡ ಹೇರಲು ತಾವು, ಸಹಕಾರ ಬೆಂಬಲ ನೀಡಬೇಕೆಂದು ಪರಮೇಶ್ವರ್ ಅವರಿಗೆ ಮನವಿ ಮಾಡಿದರು. ವಲಸೆ ಕಾನೂನಿಂದಾಗಿ ಟಿಬೆಟಿಯನ್ನರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಅದನ್ನು ಸರಿಪಡಿಸಬೇಕು ಎಂದು ಕೋರಿದರು.

ಕರ್ನಾಟಕದಲ್ಲಿ ಅತಿ ಹೆಚ್ಚಿನ ಟಿಬೆಟಿಯನ್ನರು ವಾಸಿಸುತ್ತಿದ್ದಾರೆ, ಹಲವರು ಉದ್ದಿಮೆ ನಡೆಸುತ್ತಿದ್ದು ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿದ್ದಾರೆ. ಇಲ್ಲಿನ ನಡೆಯುತ್ತಿರುವ ವ್ಯಾಪಾರ, ವ್ಯವಹಾರ ಚೆನ್ನಾಗಿದೆ ಎಂಬುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು.
ಈ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಟಿಬೆಟಿಯನ್ನರ ನೆರವಿಗೆ ಕಾಂಗ್ರೆಸ್ ಇಂದಿರಾಗಾಂಧಿಯವರ ಕಾಲದಿಂದಲೂ ನಿಂತಿದೆ. ಇಂದಿನ ಕಾಂಗ್ರೆಸ್‍ಗೆ ರಾಹುಲ್‍ಗಾಂಧಿ ನೇತೃತ್ವ ವಹಿಸಿದ್ದು, ನಿಮಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ರಾಜ್ಯದಲ್ಲೂ ಸಹ ಸಮ್ಮಿಶ್ರ ಸರ್ಕಾರ ಹೆಚ್ಚಿನ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ದೇಶದಲ್ಲಿ ಸಂಸದರು ಯಾವ ರೀತಿಯ ಕೆಲಸ ನಿರ್ವಹಿಸುತ್ತಾರೆ ಎಂಬ ಬಗ್ಗೆ ಪರಮೇಶ್ವರ್ ನಿಯೋಗಕ್ಕೆ ಮಾಹಿತಿ ಒದಗಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ