ವಿರೋಧದ ನಡುವೆಯೂ ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ; ಕೆಂಡ ಕಾರಿದ ಬಿಜೆಪಿ

ಬೆಂಗಳೂರು,ನ.5-ಕೆಲವರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಇದೇ 10ರಂದು ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾಗಿರುವುದಕ್ಕೆ ಬಿಜೆಪಿ ಕೆಂಡ ಕಾರಿದೆ.

ಈ ಸಂಬಂಧ ನಾಳೆ ಪಕ್ಷದ ಕಚೇರಿಗೆ ನಾಯಕರ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಯಾವುದೇ ಕಾರಣಕ್ಕೂ ಈ ಬಾರಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬಾರದು. ಕೇವಲ ಒಂದು ಸಮುದಾಯದ ಓಲೈಕೆಗಾಗಿ ಬಹುಸಂಖ್ಯಾತರ ಅಭಿಪ್ರಾಯವನ್ನು ಕಡೆಗಣಿಸಿ ಟಿಪ್ಪು ಜಯಂತಿ ಮಾಡಲು ಹೊರಟಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಕಮಲ ಪಡೆ ಸಿದ್ಧವಾಗಿದೆ.
ವಿಶೇಷವಾಗಿ ನಾಯಕ ಸಮುದಾಯ ಪ್ರಬಲವಾಗಿರುವ ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸಲು ಬಿಜೆಪಿ ಸಿದ್ದತೆ ನಡೆಸಿದೆ.

ಟಿಪ್ಪು ದಾಳಿ ನಡೆಸಿ ಹತ್ಯೆ ಮಾಡಿದ್ದ ಎನ್ನಲಾದ ಕೊಡಗಿನಲ್ಲೂ ಈ ಜಯಂತಿಯನ್ನು ವಿರೋಧಿಸಿ ಬಿಜೆಪಿ ಸಂಘ ಪರಿವಾರದ ಅಂಗಸಂಸ್ಥೆಗಳು 10ರಂದು ಮಡಿಕೇರಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗೆ ಸಜ್ಜಾಗಿವೆ.

ನಾಳೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಹೋರಾಟದ ರೂಪುರೇಷೆಗಳು ಸಿದ್ದವಾಗಲಿವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದನ್ನು ಚುನಾವಣೆಗಾಗಿ ಬಳಸಿಕೊಳ್ಳುವಂತೆಯೂ ಕೇಂದ್ರ ನಾಯಕರು ಸೂಚನೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದಷ್ಟು ಹಿಂದೂ ಮತಗಳ ಧೃವೀಕರಣವಾಗಲಿದೆ. ಟಿಪ್ಪು ಜಯಂತಿ ಆಚರಣೆ ಮಾಡುವುದರಿಂದ ಆ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವುದಾದರೆ, ನಾವು ಅದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪ್ರಚಾರ ನಡೆಸಲು ಸೂಚನೆ ಕೊಟ್ಟಿದೆ.

ಕೇಂದ್ರ ನಾಯಕರಿಂದಲೇ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಜ್ಯ ನಾಯಕರು ಕೂಡ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಟಿಪ್ಪು ಜಯಂತಿ ಮತ್ತೆ ವಿವಾದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ