ಕಣದಿಂದ ಹಿಂದೆ ಸರಿದ ಎಲ್.ಚಂದ್ರಶೇಖರ್ : ಬಿಜೆಪಿ ನಾಯಕರಿಗೆ ದುಗುಡ ಆರಂಭ

ಬೆಂಗಳೂರು, ನ.5-ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಆದ ಅವಮಾನವೆಂದೇ ಹೈಕಮಾಂಡ್ ನಿರ್ಧರಿಸಿದೆ. ಬಿಜೆಪಿ ನಾಯಕರಿಗೆ ದುಗುಡ ಆರಂಭವಾಗಿದೆ.
ಚುನಾವಣೆಗೆ 48 ಗಂಟೆಗೂ ಮೊದಲೇ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದು ಜೆಡಿಎಸ್ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದರು. ಈ ಮೂಲಕ ಆಪರೇಷನ್ ಕಮಲ ಮಾಡಲು ಹೊರಟವರದ್ದೇ ಆಪರೇಷನ್ ಆಗಿತ್ತು. ರಾಮನಗರ ಬಿಜೆಪಿ ಅಭ್ಯರ್ಥಿ ಮಾಡಿದ ಕೆಲಸ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಅಭ್ಯರ್ಥಿ ಎಲ್. ಚಂದ್ರಶೇಖರ್. ರಾತ್ರೋರಾತ್ರಿ ಚುನಾವಣಾ ಕಣದಿಂದ ಹಿಂದೆ ಸರಿದು ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲಿಸಿದ್ದಾರೆ. ಕಣದಲ್ಲಿ ಹೆಸರಿಗಷ್ಟೇ ಎಲ್.ಚಂದ್ರಶೇಖರ್ ಅಭ್ಯರ್ಥಿ. ಕೊನೇ ಘಳಿಗೆಯಲ್ಲಿ ಶತ್ರು ಪಾಳಯದ ಜೊತೆ ಸೇರಿಕೊಂಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಂದ ವಿವರಣೆ ಕೇಳಿದೆ. ವಿವರಣೆ ಕೇಳಿದ್ದೇ ತಡ ಪರಸ್ಪರ ಕೆಸರೆರಚಾಟ ಆರಂಭವಾಗಿದೆ.

ಬಿಜೆಪಿ ಹೈಕಮಾಂಡ್ ಗರಂ ಆಗಿದ್ದೇ ತಡ ಎಲ್. ಚಂದ್ರಶೇಖರ್ ಕೈಕೊಟ್ಟ ಹೊಣೆಗಾರಿಕೆಯನ್ನು ಯಾರು ಹೊರಲು ಸಿದ್ದರಿಲ್ಲ. ಆದರೆ ಬಿಜೆಪಿ ಹೈಕಮಾಂಡ್ ಗೆ ಯಾರು ಕಾರಣ ಅನ್ನೋ ವಿವರಣೆ ಬೇಕಿದೆ. ವಿವರಣೆ ಕೊಡಬೇಕಾದವರೆ ಈಗ ಪರಸ್ಪರ ಬೆರಳು ತೋರಿಸಿಕೊಳ್ಳುತ್ತಿದ್ದಾರೆ.

ಎಲ್.ಚಂದ್ರಶೇಖರ್‍ರನ್ನು ಬಿಜೆಪಿಗೆ ಕರೆತಂದಿದ್ದು ಆರ್, ಅಶೋಕ್, ಸಿ.ಪಿ ಯೋಗೇಶ್ವರ್ ಮತ್ತು ರುದ್ರೇಶ್ ಎಂಬುದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆರೋಪ. ಆದರೆ ಆರ್. ಅಶೋಕ್ ಅಂಡ್ ಟೀಮ್ ಹೇಳೋದು ರಾಮನಗರ ಉಸ್ತುವಾರಿ ವಹಿಸಿಕೊಂಡಿದ್ದವರು ಸರಿಯಾಗಿ ನೋಡಿಕೊಂಡು, ಅಭ್ಯರ್ಥಿ ಜೊತೆ ಕ್ಷೇತ್ರದಲ್ಲೇ ಇದ್ದಿದ್ದರೆ ಅವರ್ಯಾಕೆ ಡಿ.ಕೆ. ಸಹೋದರರ ಖೆಡ್ಡಾಗೆ ಬೀಳುತ್ತಿದ್ದರು ಎನ್ನೋ ವಾದ ಮಾಡುತ್ತಿದ್ದಾರೆ.

ಇನ್ನು ಬಿಜೆಪಿಯ ಒಂದು ತಂಡ ಮಾತ್ರ ಯಡಿಯೂರಪ್ಪನವರೇ ನೇರ ಹೊಣೆ ಅನ್ನುತ್ತಿದೆ. ಸಿ.ಪಿ.ಯೋಗೇಶ್ವರ್ ಕರೆದುಕೊಂಡು ಬಂದ್ರು ಅಂದ ಕೂಡಲೇ ಬಾವುಟ ಕೊಟ್ಟು ಬಿ ಫಾರ್ಮ್ ಕೊಟ್ಟಿದ್ಯಾಕೆ. ಬಿಜೆಪಿ ಕಾರ್ಯಕರ್ತರು ಇರಲಿಲ್ವಾ ಎಂದು ದೂರು ನೀಡುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್‍ಗೆ ಬಿಎಸ್‍ವೈ ಮಣೆ ಹಾಕಿದ್ದಕ್ಕೆ ಇಷ್ಟೆಲ್ಲ ಯಡವಟ್ಟು ಆಗಿದೆ. ಸಿ.ಪಿ.ಯೋಗೇಶ್ವರ್ ಅವರದ್ದೆ ತಲೆದಂಡ ಆಗಬೇಕು ಅನ್ನೋದು ಬಿಎಎಸ್‍ವೈ ವಿರೋಧಿ ಪಾಳಯದ ಆರೋಪವಾಗಿದೆ. ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಮಾಡಿದ ರಾಜಕೀಯ ಮೋಸ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ