ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ: ನಟ ಜಾಗ್ವರ್ ಜಗ್ಗ ಬಂಧನ

ಬೆಂಗಳೂರು: ಅಕ್ರಮ ಪಿಸ್ತೂಲು, ಮದ್ದುಗುಂಡು ಸೇರಿ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ್ದ ಸ್ಯಾಂಡಲ್ ವುಡ್ ನಟ ಜಾಗ್ವರ್ ಜಗ್ಗ (ಜಗದೀಶ್ ಹೊಸಮಠ) ಸೇರಿ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ  ಎರಡು ಪಿಸ್ತೂಲು ಹಾಗೂ 21 ಜೀವಂತ ಗುಂಡುಗಳನ್ನು ಸಿಸಿಬಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.  ಆರೋಪಿಗಳನ್ನು  ಜಗದೀಶ್ ಎಸ್.ಹೊಸಮಠ (25), ಮೊಹಮ್ಮದ್ ನಿಜಾಮ್(25),,  ಬಿ.ಜಿ.ಸತೀಶ್‍ಕುಮಾರ್(44), ಹಾಗೂ ಸಯ್ಯದ್ ಸಮೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯ ಗಣೇಶ್‍ಪೇಟೆಯ ಶೆಟ್ಟರ ಓಣಿಯಲ್ಲಿ ವಾಸವಾಗಿದ್ದ ನಟ ಜಗದೀಶ್ ಹೊಸಮಠ “ಸರ್ಕಾರ್” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು.

ಮೊದಲಿಗೆ ಮಹಮ್ಮದ್ ನಿಜಾಮ್ ಮತ್ತು ಜಗದೀಶ್ ಬೆಂಗಳೂರಿನ  ಬೆಮಲ್ ಆಡಿಟೋರಿಯಂ, ಬೆಮಲ್‍ಟೌನ್ ಶಿಫ್ಟ್ ಕ್ವಾಟರ್ಸ್ ಸಮೀಪದಲ್ಲಿ ಪಿಸ್ತೂಲು ಹಾಗೂ ಮದ್ದುಗುಂಡುಗಳ ಮಾರಾಟಕ್ಕಾಗಿ ಗಿರಾಕಿಗಳ ಹುಡುಕಾಟದಲ್ಲಿದ್ದಾರೆಂದು ತಿಳಿದ ಸಿಸಿಬಿಯ ಅಧಿಕಾರಿಗ:ಉ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಅವರು ನೀಡಿದ ಮಾಹಿತಿ ಆಧಾರವಾಗಿಟ್ಟುಕೊಂಡು ಮತ್ತಿಬ್ಬರು ಆರೋಪಿಗಳಾದ ಸತೀಶ್ ಕುಮಾರ್ ಮತ್ತು ಸಯ್ಯದ್ ಸಮೀರ್ ಅವರನ್ನು ಬಂಧಿಸಲಾಗಿದೆ.

ಸಧ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಇನ್ನಷ್ಟು ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ