ಬೆಂಗಳೂರು, ನ.4-ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಸರ್ಕಾರದ ತೀರ್ಮಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧಿಸುವುದು ಸಹಜ. ಬಿಜೆಪಿ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಆದರೆ ವಿರೋಧ, ಪ್ರತಿಭಟನೆ ಸಮಾಜದ ಶಾಂತಿ ಕದಡುವಂತಿರಬಾರದು. ಶಾಂತಿಗೆ ಭಂಗವಾದರೆ ಪೆÇಲೀಸ್ ಅಧಿಕಾರಿಗಳು ಸ್ಥಳದಲ್ಲೇ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಚುನಾವಣಾ ವರ್ಷವಾಗಿರುವುದರಿಂದ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ವ್ಯಾಪಕವಾಗಿ ವಿರೋಧಿಸಲಿದೆ ಎಂಬುದು ಪೆÇಲೀಸ್, ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ಇದಕ್ಕೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜಕೀಯವಾಗಿ ವಿರೋಧಿಸಿದರೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ರಾಜಕೀಯವಾಗಿ ಉತ್ತರ ಕೊಡಲಿದೆ. ಆದರೆ ಕಾನೂನು ಹಾಳು ಮಾಡುವಂತಹ ಅಧಿಕಾರ ಮತ್ತು ಅವಕಾಶ ಅವರಿಗಿಲ್ಲ. ಹಾಗೇನಾದರೂ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ದೀಪಾವಳಿ ಹಬ್ಬ ಹರ್ಷ ಮತ್ತು ಕಷ್ಟದ ಹಬ್ಬವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 100 ತಾಲೂಕುಗಳಲ್ಲಿ ಬರ ಆವರಿಸಿದೆ. ಸಂಪ್ರದಾಯದಂತೆ ದೀಪಾವಳಿ ಆಚರಿಸಿ, ಪಟಾಕಿ ಸಿಡಿಸದಂತೆ ಸಂಕಷ್ಟದಲ್ಲಿರುವವರಿಗೆ ಮನವಿ ಮಾಡಿದರು.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗಿದೆ. ಖಾಸಗಿ ವಾಹನಗಳ ನಿಷೇಧಿಸಲು ನಿರ್ಧರಿಸಲಾಗಿದೆ. ಪಟಾಕಿಗಳನ್ನೂ ನಿಷೇಧಿಸಲಾಗಿದೆ. ನಮ್ಮಲ್ಲೂ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಲಾಗಿದೆ ಮತ್ತು ಪಟಾಕಿಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದ ಹೇಳಿದ ಅವರು, ವಾಯುಮಾಲಿನ್ಯ ನಿಯಂತ್ರಿಸಲು ಪಟಾಕಿಗಳನ್ನು ಸಿಡಿಸುವುದನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ವಯಂಪ್ರೇರಿತರಾಗಿ ಕಣದಿಂದ ನಿವೃತ್ತಿಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಯಾವುದೇ ಆಪರೇಷನ್ ಹಸ್ತ ನಡೆಸಿಲ್ಲ. ಯಾರೂ ಒತ್ತಡ ಹೇರಿ ಕರೆತಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಡಪಡಿಸಿದರು.
ಉಪಚುನಾವಣೆಯಲ್ಲಿ ಐದೂ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದೇ ಬಿಟ್ಟರು ಎಂಬ ಮನೋಭಾವದ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರಬಹುದು ಎಂದುಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಸಂಪ್ರದಾಯದಂತೆ ಚುನಾವಣಾ ಉಸ್ತುವಾರಿಯಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿದ್ದೇವೆ ಎಂದು ಹೇಳಿದರು.
ಉಪಚುನಾವಣೆ ಫಲಿತಾಂಶದ ನಂತರ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ನಡೆಯಲಿದೆ. ಇದಕ್ಕಾಗಿ ಎಲ್ಲಾ ತಯಾರಿ ನಡೆದಿದೆ. ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಾಲಿನ ಆರು ಸಚಿವ ಸ್ಥಾನಗಳನ್ನು ಏಕಕಾಲದಲ್ಲಿ ನೇಮಕ ಮಾಡಬೇಕೇ ಅಥವಾ ಕೆಲವನ್ನು ಖಾಲಿ ಇಡಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಗಮ ಮಂಡಳಿಗಳಿಗೆ ಮೊದಲು ಶಾಸಕರನ್ನು ನೇಮಕ ಮಾಡಲಾಗುವುದು. ನಂತರ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದರು.