ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಡೆಸಿದರೆ ಮುಂದೆ ಉಂಟಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎಚ್ಚರಿಕೆ

ಬೆಂಗಳೂರು, ನ.4- ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು. ಬಹುಜನರ ಭಾವನೆಗೆ ವಿರುದ್ಧವಾಗಿ ಆಚರಣೆ ನಡೆಸಿದರೆ ಮುಂದೆ ಉಂಟಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಎಚ್ಚರಿಸಿದ್ದಾರೆ.

ಹುಬ್ಬಳಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಆಚರಣೆ ಮಾಡಲು ಬಿಜೆಪಿ ಅವಕಾಶ ನೀಡುವುದಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಸರ್ಕಾರ ವತಿಯಿಂದ ಯಾವ ಕಾರಣಕ್ಕಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಚರಣೆ ಮಾಡಲು ಮುಂದಾದಾಗ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿ ಪಕ್ಷದ ವತಿಯಿಂದ ಆಚರಣೆ ಮಾಡಿಕೊಳ್ಳಿ ಎಂದು ಹೇಳಿದ್ದರು. ಈಗ ಸರ್ಕಾರದ ವತಿಯಿಂದಲೇ ಆಚರಣೆ ಮಾಡಲು ಹೊರಟಿರುವುದು ಅವರ ದ್ವಂದ್ವ ನೀತಿಗೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

ಕಾಂಗ್ರೆಸ್ ಇಲ್ಲವೇ ಜೆಡಿಎಸ್ ತಮ್ಮ ಪಕ್ಷದ ವತಿಯಿಂದ ಆಚರಿಸಿಕೊಂಡರೆ ನಮ್ಮದೇನು ತಕರಾರು ಇಲ್ಲ. ಸಾರ್ವಜನಿಕರ ಹಣವನ್ನು ಖರ್ಚು ಮಾಡಿ ಒಂದು ವರ್ಗವನ್ನು ಓಲೈಸುವ ಕಾರಣಕ್ಕಾಗಿ ಇದನ್ನು ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಟಿಪ್ಪು ಜಯಂತಿ ಆಚರಣೆಗೆ ನಾಯಕ ಸಮುದಾಯ ಹಾಗೂ ಕೊಡಗಿನವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೆ ಆಚರಣೆ ಸಂದರ್ಭದಲ್ಲಿ ಯಾವ ಯಾವ ಅನಾಹುತವಾಗಿದೆ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಪುನಃ ಆಚರಣೆ ಮಾಡಲು ಹೊರಟಿರುವುದು ಸಮಾಜದಲ್ಲಿ ಒಡಕು ಉಂಟು ಮಾಡುವ ಉದ್ದೇಶದಿಂದಲೇ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎಂದರು.

ಕೆಲವರಿಗೆ ಟಿಪ್ಪು ಜಯಂತಿ ಆಚರಣೆ ಬೇಡವಾಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಕಾರಣಕ್ಕಾಗಿ ಸರ್ಕಾರ ಇಂತಹ ಕೆಲಸಕ್ಕೆ ಕೈ ಹಾಕಿದೆ. ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ. ಕೂಡಲೇ ಆಚರಣೆ ಕೈ ಬಿಡುವಂತೆ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ