ಬೆಂಗಳೂರು, ನ.1- ಐಟಿ ಸಿಟಿ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಕಂಪು… ಎಲ್ಲೆಲ್ಲೂ ಹಳದಿ-ಕೆಂಪು ಬಾವುಟಗಳು ರಾರಾಜಿಸಿದವು. ನಾಡತಾಯಿ ಭುವನೇಶ್ವರಿಯ ಆರಾಧನೆ, ಕನ್ನಡಕ್ಕೆ ಜೈಕಾರ ಮೊಳಗಿದವು. ಗಲ್ಲಿ-ಗಲ್ಲಿಗಳಲ್ಲಿ, ಎಲ್ಲ ವೃತ್ತಗಳಲ್ಲಿ ಕನ್ನಡದ ಧ್ವಜವನ್ನು ಹಾರಿಸಲಾಯಿತು. ರಾಜ್ಯ ಸರ್ಕಾರ ಸೇರಿದಂತೆ ನೂರಾರು ಸಂಘಟನೆಗಳು ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಿದವು.
ಹಲವು ಸಂಘಟನೆಗಳು ಕನ್ನಡಪರ ಹೋರಾಟಗಾರರನ್ನು, ಸಾಧಕರನ್ನು ಸನ್ಮಾನಿಸಿ ಗೌರವಿಸಿದವು. ಹಲವೆಡೆ ನೇತ್ರದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ವತಿಯಿಂದ 63ನೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಹಿತಿಗಳಾದ ಡಾ.ಎಂ.ಜಿ.ನಾಗರಾಜ್, ಡಾ.ಡಿ.ಎಂ.ಅಕ್ಕಿ, ಡಾ.ವೀರಣ್ಣ ರಾಜೂರ, ಡಾ.ಜಗನ್ನಾಥ್ ಹೆಬ್ಬಾಳೆ, ಡಾ.ಎಚ್.ಟಿ.ಶೈಲಾ, ಡಾ.ಪ್ರೇಮಾಭಟ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್ಸ್ ಹೌಸ್ ವತಿಯಿಂದ ಏರ್ಪಡಿಸಿದ್ದ ಕನ್ನಡ ಅಂದು-ಇಂದು-ಮುಂದು ವಿಚಾರ ಸಂಕಿರಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ.ಚಂದ್ರಶೇಖರ ಕಂಬಾರ, ಪದ್ಮಶ್ರೀ ಪೆÇ್ರ.ಕೆ.ಎಸ್.ನಿಸಾರ್ ಅಹಮ್ಮದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ.ಎಸ್.ಜಿ.ಸಿದ್ದರಾಮಯ್ಯ ಮುಂತಾದವರು ಪಾಲ್ಗೊಂಡಿದ್ದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು.
ಅಖಿಲ ಕರ್ನಾಟಕ ಸ್ವಾಭಿಮಾನಿ ಚಾಲಕರ ಸಂಘ ರಾಜ್ಯೋತ್ಸವದ ಅಂಗವಾಗಿ ನೇತ್ರದಾನ ಶಿಬಿರ ಆಯೋಜಿಸಿತ್ತು. ಕನ್ನಡ ಗೆಳೆಯರ ಬಳಗದ ವತಿಯಿಂದ ಬಸವನಗುಡಿ ನ್ಯಾಷನಲ್ ಸ್ಕೂಲ್ ಮೈದಾನ ವೃತ್ತದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.
ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ವತಿಯಿಂದ ಕುರುಬರಹಳ್ಳಿ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮಹಾಲಕ್ಷ್ಮಿ ಲೇಔಟ್ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿವೇಕಾನಂದ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ನಾಡತಾಯಿ ಭುವನೇಶ್ವರಿಗೆ ನಮನ ಸಲ್ಲಿಸಲಾಯಿತು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಕನ್ನಡ ಸಂಘದ ವತಿಯಿಂದ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾಲಿಕೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಧ್ವಜಾರೋಹಣ ನೆರವೇರಿಸಲಾಯಿತು.
ಪಾಪ್ಯುಲರ್ ಹೆಲ್ತ್ಕೇರ್ ವತಿಯಿಂದ ರಾಜ್ಯೋತ್ಸವದ ಪ್ರಯುಕ್ತ ಮಕ್ಕಳು ಮತ್ತು ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನೂರಾರು ಜನ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕನ್ನಡ ಯುವಜನ ಸಂಘದ ವತಿಯಿಂದ ಹೊಂಬೇಗೌಡ ನಗರದಲ್ಲಿ ಏರ್ಪಡಿಸಿದ್ದ 63ನೆ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ವತಿಯಿಂದ ಏರ್ಪಡಿಸಿದ್ದ ರೆವರೆಂಡ್ ಕೆಟಲ್ ಸ್ಮರಣೆ ಮತ್ತು ಕನ್ನಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಪತ್ರಕರ್ತ, ರಾಷ್ಟ್ರೀಯ ಸ್ವರ್ಣಕಮಲ ಪುರಸ್ಕøತ, ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಅವರಿಗೆ ಪ್ರಶಸ್ತಿ ನೀಡಲಾಯಿತು.
ಅಖಿಲ ಕರ್ನಾಟಕ ಕೇಂದ್ರ ಚಳವಳಿ ವತಿಯಿಂದ ಗುರುದೇವ್ ನಾರಾಯಣ್ಕುಮಾರ್ ಅವರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪವನ್ನು ಬನ್ನಪ್ಪ ಪಾರ್ಕ್ ಆಟದ ಮೈದಾನದಲ್ಲಿ ಸಂಸದ ಪಿ.ಸಿ.ಮೋಹನ್ ಉದ್ಘಾಟಿಸಿದರು.
ಶಾಸಕರಾದ ಉದಯ್ ಗರುಡಾಚಾರ್, ಮಾಜಿ ಮೇಯರ್ ಸಂಪತ್ರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಚಾಮರಾಜಪೇಟೆ ನಾಡಹಬ್ಬದ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಚಿವ ಜಮೀರ್ ಅಹಮ್ಮದ್ಖಾನ್ ಉದ್ಘಾಟಿಸಿದರು. ನಾಡ ವೈಭವವನ್ನು ಬಿಂಬಿಸುವಂತಹ ಜಾನಪದ ಕಲೆಗಳ ಪ್ರದರ್ಶನ ಜನಮನ ಸೂರೆಗೊಂಡಿತು.
ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಕನ್ನಡದ ಕಹಳೆ ಮೊಳಗಿತು.