ಬೆಂಗಳೂರು, ಅ.30-ಯಾರನ್ನು ಅಭ್ಯರ್ಥಿ ಮಾಡಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ, ಸಂಸದರಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಜನ ನಿರ್ಧರಿಸುತ್ತಾರೆ, ಶ್ರೀರಾಮುಲು ಅಲ್ಲ ಎಂದು ಸಚಿವ ರಮೇಶ್ ಜಾರಕಿ ಹೊಳಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯವನ್ನು ಒಡೆಯಲು ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ಎಸ್‍ಟಿ ಸಮುದಾಯಕ್ಕೆ ಮೀಸಲಾಗಿದ್ದು, ಯಾರಾದರೂ ಚುನಾವಣೆಗೆ ನಿಲ್ಲಬಹುದಾಗಿದೆ. ನಮ್ಮ ಪಕ್ಷ ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.ಜನ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹವಿತ್ತು.ಆದರೆ ಹೈಕಮಾಂಡ್ ಉಗ್ರಪ್ಪ ಅವರನ್ನು ಆಯ್ಕೆ ಮಾಡಿತ್ತು. ಹೈಕಮಾಂಡ್ ಆದೇಶಕ್ಕೆ ತಲೆ ಬಾಗಿ ನಾವೆಲ್ಲ ಉಗ್ರಪ್ಪ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ನನ್ನ ಸಹೋದರ ಸತೀಶ್ ಜಾರಕಿ ಹೊಳಿ ಅವರು ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಕರೆದರೆ ನಾನೂ ಹೋಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ನನಗೆ ವಹಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಕಳೆದ ನಾಲ್ಕು ದಿನಗಳಿಂದ ಗಂಟಲು ನೋವಿತ್ತು. ಹಾಗಾಗಿ ಎಲ್ಲೂ ಹೋಗಲು ಆಗಲಿಲ್ಲ. ಬಳ್ಳಾರಿಯ ಕೂಡ್ಲಗಿ ಉಸ್ತುವಾರಿ ಕೊಟ್ಟಿದ್ದರು. ಅಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಬಿಜೆಪಿಯವರು ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ವಿಶ್ವಾಸ ವ್ಯಕ್ತಪಡಿಸಿದ ಅವರು, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯವಿದೆ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಳ್ಳಾರಿ ಉಸ್ತುವಾರಿ ಹೊಣೆ ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ.ನಮ್ಮಿಬ್ಬರ ನಡುವಿನ ಭಿನ್ನ ಮತವನ್ನು ಸಿದ್ದರಾಮಯ್ಯನವರು ವಿದೇಶದಿಂದ ಬಂದ ಮೇಲೆ ಬಗೆಹರಿಸಿದ್ದಾರೆ. ಆರಂಭದಲ್ಲಿ ಸಿಟ್ಟು ಇದ್ದುದ್ದು ನಿಜ. ಗೊಂದಲ ಈಗ ಮುಗಿದ ಅಧ್ಯಾಯ ಎಂದು ಹೇಳಿದರು.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್‍ನಲ್ಲೇ ಇರುತ್ತೇನೆ. ಬಿಜೆಪಿಯ ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.ಈ ಬಗ್ಗೆ ಕಿವಿಗೊಡಬೇಡಿ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬದಲಾಗುತ್ತದೆ ಎಂಬ ಮಾಹಿತಿ ನನಗೆ ಗೊತ್ತಿಲ್ಲ ಎಂದು ರಮೇಶ್ ಜಾರಕಿ ಹೊಳಿ ಹೇಳಿದರು.
ಜನಾರ್ಧನರೆಡ್ಡಿ ಜೈಲಿಗೆ ಹೋಗಲು ಸಿದ್ದರಾಮಯ್ಯ ಕಾರಣ ಎಂಬ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಜನಾರ್ಧನರೆಡ್ಡಿ ಪ್ರಚಾರ ಪ್ರಿಯರು. ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಜವಾಬ್ದಾರಿಯಿಂದ ತಮ್ಮ ಕೆಲಸಗಳನ್ನು ನಿರ್ವಹಿಸಿದ್ದರು ಎಂದು ತಿಳಿಸಿದರು.