ಶಿವಮೊಗ್ಗ, ಅ.28- ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ಮುಚ್ಚಿಸಲು ಯಾರಪ್ಪನಿಂದಲೂ ಸಾಧ್ಯವಾಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ಜವಾಹರ್ಲಾಲ್ ನೆಹರು, ಇಂದಿರಾಗಾಂಧಿ ಅವರಿಂದಲೂ ಬಿಜೆಪಿ ಬಾಗಿಲು ಮುಚ್ಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಾವ ಲೆಕ್ಕ ಎಂದು ತಿರುಗೇಟು ನೀಡಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬೀಗ ಹಾಕುವುದಾಗಿ ದೇವೇಗೌಡರು ಹೇಳಿದ್ದಾರೆ. ಆದರೆ, ಯಾರಿಂದಲೂ ಬಿಜೆಪಿಗೆ ಬೀಗ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಜೆಡಿಎಸ್ ದುರ್ಬಲವಾಗಿರುವುದರಿಂದ ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಚುನಾವಣಾ ಪ್ರಚಾರ ಮಾಡಿದರೂ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜನರಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕೆ ಹೊರತು ಬೇರೆ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಸಲಹೆ ಮಾಡಿದರು.