ಬೆಂಗಳೂರು, ಅ.28-ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರ ಕತ್ರಿಗುಪ್ಪೆಯ ಮನೆಯ ಮುಂದೆ ಇಂದು ಹೈಡ್ರಾಮಾ ನಡೆಯಿತು.
ನಾಗರತ್ನ ಅವರು ವಿಜಯ್ ಅವರ 2ನೆ ಪತ್ನಿ ಕೀರ್ತಿಗೌಡ ಅವರಿಗೆ ಹಲ್ಲೆ ನಡೆಸಿದ ವೀಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಗಿರಿನಗರ ಪೊಲೀಸರು ನಾಗರತ್ನ ಮತ್ತು ಅವರ ಪುತ್ರಿ ಮೋನಿಕಾ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಅವರ ಮನೆಗೆ ಇಂದು ಬೆಳಗ್ಗೆ ತೆರಳಿದ್ದರು.
ಪೊಲೀಸರು ಮನೆಗೆ ಬರುತ್ತಿದ್ದಂತೆ ಮನೆ ಬಾಗಿಲು ಹಾಕಿಕೊಂಡಿರುವ ನಾಗರತ್ನ ಬಾಗಿಲು ತೆರೆಯದೆ ಪೊಲೀಸರನ್ನು ಸತಾಯಿಸಿದ್ದಾರೆ. ಕಿಟಕಿಯ ಮೂಲಕವೇ ಪೊಲೀಸರೊಂದಿಗೆ ಮಾತನಾಡಿದ ಮೋನಿಕಾ, ತಾಯಿ ಮನೆಯಲ್ಲಿ ಇಲ್ಲ, ಮನೆಯೊಳಗೆ ಬರಲು ನ್ಯಾಯಾಲಯದಿಂದ ವಾರಂಟ್ ತಂದಿದ್ದೀರಾ, ತಂದಿದ್ದರೆ ತೋರಿಸಿ ಎಂದು ಕೇಳಿದ್ದಾಳೆ.
ಇದರಿಂದ ಪೊಲೀಸರು ಮಧ್ಯಾಹ್ನದವರೆಗೂ ಮನೆ ಬಳಿ ಕಾಯುತ್ತಿದ್ದುದು ಕಂಡುಬಂತು. ನಾಗರತ್ನ ಅವರ ಪರ ವಕೀಲರು ಗಿರಿನಗರ ಠಾಣೆಗೆ ತೆರಳಿ, ನಾಗರತ್ನ ಅವರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿಲ್ಲ. ಕೈಯಿಂದ ಹಲ್ಲೆ ನಡೆಸಿದ್ದು, ಇದು ಗಂಭೀರ ಅಪರಾಧ ಪ್ರಕರಣವಲ್ಲ. ಆದ್ದರಿಂದ ಅವರಿಗೆ ಠಾಣೆಯಲ್ಲೇ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ.