ನವದೆಹಲಿ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಜಪಾನ್ ಪ್ರಧಾನಿ ಶಿಂಜೊ ಅಬೆ ಅದ್ದೂರಿಯಾಗಿ ಸ್ವಾಗತಿಸಿದ್ದು, ಪ್ರಧಾನಿ ಮೋದಿ ತಮ್ಮ ನಂಬಿಕಸ್ಥ ಸ್ನೇಹಿತರಲ್ಲಿ ಒಬ್ಬರಾಗಿದ್ದಾರೆ ಎಂದಿದ್ದಾರೆ.
ಜಪಾನ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಉಭಯ ದೇಶಗಳ ನಾಯಕೂ ಪಾಲ್ಗೊಂಡು ಬಳಿಕ ಮಾತನಾಡಿದ ಶಿಂಜೊ ಅಬೆ, ಸ್ಥಳೀಯ ಮತ್ತು ವಿಶ್ವದ ಸಮೃದ್ಧತೆಯನ್ನು ಜಾಗತಿಕ ಶಕ್ತಿಯಾಗಿ ರೂಪಿಸಲು ಭಾರತ ಪ್ರಯಾಣ ಮುಂದುವರಿಸುತ್ತಿದೆ ಎಂದಿದ್ದಾರೆ. ಸ್ವತಂತ್ರ ಮತ್ತು ಮುಕ್ತ ಇಂಡೊ-ಫೆಸಿಫಿಕ್ ನ್ನು ಸಾಕಾರಗೊಳಿಸಲು ಭಾರತೀಯ ನಾಯಕರೊಂದಿಗೆ ಒಟ್ಟಾಗಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಜಪಾನ್ ಬಯಸುತ್ತಿರುವುದಾಗಿ ಹೇಳಿದ್ದಾರೆ.
ಭಾರತಕ್ಕೆ ಪ್ರಧಾನಿ ಮೋದಿಯವರು ಒಬ್ಬ ಅದ್ವಿತೀಯ ಅಸಾಮಾನ್ಯ ನಾಯಕ ಎಂದು ಶ್ಲಾಘಿಸಿದ ಅಬೆ, ವಿಶ್ವದಲ್ಲಿನ ಅತಿದೊಡ್ಡ ಸಾಮರ್ಥ್ಯಕ್ಕೆ ಭಾರತ ಮತ್ತು ಜಪಾನ್ ಸಂಬಂಧ ಇನ್ನಷ್ಟು ವರವಾಗಿದೆ ಎಂದು ನಾನು ನಂಬುತ್ತೇನೆ. ಭಾರತ-ಜಪಾನ್ ಸಹಕಾರ ವಿಸ್ತಾರವಾಗಿ ಹಲವು ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದು ಭದ್ರತೆ, ಹೂಡಿಕೆ, ಮಾಹಿತಿ ತಂತ್ರಜ್ಞಾನ, ಕೃಷಿ, ಆರೋಗ್ಯ, ಪರಿಸರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಕಾರ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಭಾರತದ ಆರ್ಥಿಕ ಅಭಿವೃದ್ಧಿಗೆ ಜಪಾನ್ ಸಹಕಾರ ನೀಡಲು ಬದ್ಧವಾಗಿದೆ. ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ದೇಶದ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಅದು ಹೈ ಸ್ಪೀಡ್ ರೈಲು, ಸಬ್ ವೇ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ ಎಂದರು.
ಮುಂಬೈ-ಅಹಮಾದಾಬಾದ್ ನಡುವೆ ಶಿಂಕನ್ಸೇನ್ ಬುಲೆಟ್ ರೈಲು ಕಾರ್ಯಾಚರಣೆ ಭವಿಷ್ಯದಲ್ಲಿ ಭಾರತ-ಜಪಾನ್ ಸ್ನೇಹತ್ವದ ಹೊಸ ಗುರುತೆನಿಸಿಕೊಳ್ಳಲಿದೆ ಎಂದು ಶಿಂಜೊ ಅಬೆ ಹೇಳಿದ್ದಾರೆ.