ಲಂಡನ್​ನಿಂದ ವಾಪಸ್ಸಾದ ಮಾಜಿ ಪ್ರಧಾನಿ ದೇವೇಗೌಡ; ಚುನಾವಣಾ ಪ್ರಚಾರದಲ್ಲಿ ಭಾಗಿ

ಬೆಂಗಳೂರು: ಲಂಡನ್​ಗೆ ತೆರಳಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಇಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಂದಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದು, ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮಧ್ಯಾಹ್ನ ಸೊಸೆ ಅನಿತಾ ಕುಮಾರಸ್ವಾಮಿ ಪರ ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಳೆ ಕೂಡ್ಲಿಗಿಯಲ್ಲಿ ಬಳ್ಳಾರಿ ಲೋಕಸಭಾ ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ದೇವೇಗೌಡರಿಗೆ ಸಾಥ್ ನೀಡಲಿದ್ದಾರೆ. ನಂತರ ದೇವೇಗೌಡರು ಸಂಜೆ ಬಳ್ಳಾರಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಬಳ್ಳಾರಿಯ ನಕ್ಷತ್ರ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಶಿವಮೊಗ್ಗದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತಿ ಇರುತ್ತಾರೆ.
ಅಕ್ಟೋಬರ್ 31 ರಂದು ಬುಧವಾರ ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಜೊತೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇವೇಗೌಡರು ಇದೇ 24 ರಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಲಂಡನ್​ಗೆ ತೆರಳಿದ್ದರು. ಐದು ದಿನಗಳ ಕಾಲ ಲಂಡನ್​ನಲ್ಲಿ ಉಳಿದು, ಇಂದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ