ಬೆಂಗಳೂರು, ಅ.27-ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ನಡೆಯುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಡಾ.ಬಿ.ಎಲ್. ವೇಣು ಅವರ ಸಾಕ್ಷ್ಯಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಡಾ.ಬಿ.ವಿ.ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಅಪಮಾನ ಮಾಡಲಾಗಿದೆ. ಕೂಡಲೇ ಅಪಮಾನದ ಹೇಳಿಕೆಯನ್ನು ಅದರಿಂದ ತೆಗೆದುಹಾಕಬೇಕು ಎಂದು ಅಹಿಂದ ಸಂಘಟನಾ ಕಾರ್ಯದರ್ಶಿ ಸೂರ್ಯಪ್ರಕಾಶ್ ಕೋಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಮಾನ ಮಾಡಿರುವ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ವಿವರಣೆ ಕೇಳಲು ಸಂಘಸಂಸ್ಥೆಗಳ ಮುಖಂಡರು ಪ್ರಯತ್ನಿಸಿದಾಗ, ನಾಗತಿಹಳ್ಳಿ ಅವರು ಬೇಜವಾಬ್ದಾರಿಯ ಉತ್ತರ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ ಈ ಸಾಕ್ಷ್ಯಚಿತ್ರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು ಎಂದು ಅವರು ಆರೋಪಿದರು.
ವ್ಯಕ್ತಿನಿಂದನೆ ಮಾಡಿರುವ ಈ ಸಾಕ್ಷ್ಯಚಿತ್ರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಬಾರದು ಎಂದು ಆಗ್ರಹಿಸಿದ ಅವರು, ಈ ರೀತಿಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದರೆ ಸರ್ಕಾರದ ಆಶಯಗಳಿಗೆ ವಿರುದ್ದವಾದ ನಿಲುವು ತಳೆದಂತಾಗುತ್ತದೆ. ಹಿಂದುಳಿದ, ತಳ ಸಮುದಾಯಗಳಿಗೆ ಅವಕಾಶ ಮಾಡಿಕೊಟ್ಟು ಪೆÇ್ರೀ ಡಾ.ಬಿ.ವಿ.ವೈಕುಂಠರಾಜು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಆಗಿರುತ್ತದೆ. ಇದು ಖಂಡನೀಯ ಎಂದು ಅವರು ತಿಳಿಸಿದರು.
ಕೂಡಲೇ ಸಾಕ್ಷ್ಯಚಿತ್ರದಲ್ಲಿರುವ ವೈಕುಂಠರಾಜು ಅಪಮಾನದ ಹೇಳಿಕೆಯನ್ನು ತೆಗೆದು ಹಾಕಬೇಕು. ವಿನಾಕಾರಣ ಮಾನಸಿಕವಾಗಿ ನೊಂದಿರುವ ರಂಗ ಕಲಾವಿದ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಆರ್.ವೆಂಕಟರಾಜು ಅವರಿಗೆ ಲಿಖಿತ ರೂಪದ ಕ್ಷಮೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ಕೇಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.