ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಇಂದಿರಾ ಕ್ಯಾಂಟಿನ್ ಊಟವನ್ನೇ ನೀಡಬೇಕು: ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಅ.22- ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಪೌರ ಕಾರ್ಮಿಕರು ಹಾಗೂ ಜನಸಾಮಾನ್ಯರು ಸೇವಿಸುವ ಇಂದಿರಾ ಕ್ಯಾಂಟಿನ್ ಊಟವನ್ನೇ ನೀಡಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟಿನ್‍ಗೆ ಆಹಾರ ಸರಬರಾಜು ಮಾಡುವವರು ಪಾಲಿಕೆ ಸಭೆಗಳಿಗೆ ವಿಶೇಷ ಊಟ ಸರಬರಾಜು ಮಾಡುವ ವಿಷಯ ಕುರಿತಂತೆ ಪ್ರತಿಕ್ರಿಯಿಸಿದ ಪದ್ಮನಾಭರೆಡ್ಡಿ ವಿಶೇಷ ಊಟ ಏನೂ ಬೇಕಿಲ್ಲ, ಜನಸಾಮಾನ್ಯರು ಯಾವ ಊಟ ಮಾಡುತ್ತಾರೋ ಅದೇ ಊಟವನ್ನು ಸದಸ್ಯರು ಮತ್ತು ಅಧಿಕಾರಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ ಸರಿಯಾಗಿ ಗುಂಡಿ ಮುಚ್ಚಿಲ್ಲ. ನಾಳೆ ಹೈಕೋರ್ಟ್‍ಗೆ ವರದಿ ನೀಡುತ್ತೇವೆ ಎಂದು ಹೇಳಲಾಗುತ್ತಿದೆ. ಮೊದಲು ಸಮರ್ಪಕವಾಗಿ ಗುಂಡಿ ಮುಚ್ಚಿ ನಂತರ ವರದಿ ಸಲ್ಲಿಸಲಿ. ಗುಂಡಿಯನ್ನೇ ಮುಚ್ಚದೆ ವರದಿ ನೀಡಲು ಮುಂದಾಗುತ್ತಿರುವುದು ಹಾಸ್ಯಾಸ್ಪದ ಎಂದರು.

ನ.12ರಂದು ಸ್ಥಾಯಿಸಮಿತಿ ಸದಸ್ಯರು ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಪಕ್ಷೇತರರು ಮತ್ತು ಜೆಡಿಎಸ್‍ನಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ನಮಗೆ ಅವರ ಸಹಕಾರ ಬೇಕಿಲ್ಲ. ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ಮುಖಂಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇನ್ನು ಜಾಹೀರಾತು ವಿನ್ಯಾಸಗಳನ್ನು ಪಾಲಿಕೆ ತೆರವುಗೊಳಿಸದೆ ಹಾಗೇ ಬಿಟ್ಟಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ಪಾಲಿಕೆ ಅಧಿಕಾರಿಗಳು ಜಾಹೀರಾತು ವಿಚಾರದಲ್ಲಿ ಶಾಮೀಲಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ