ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ ಪರ್ವ ಪಾದಯಾತ್ರೆಗೆ ಚಾಲನೆ
ಬೆಂಗಳೂರು, ಮಾ.6- ಬೆಂಗಳೂರು ಮಹಾನಗರ ಜನತಾದಳ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಗರದಲ್ಲಿ ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ ಪರ್ವ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಬಸವನಗುಡಿ ವಿಧಾನಸಭಾ ಕ್ಷೇತ್ರದ ದೊಡ್ಡಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಬಾಗೇಗೌಡ ಮತ್ತಿತರರು ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮಾಡಿದ್ದ ಅಭಿವೃದ್ಧಿ ಯೋಜನೆಗಳು, ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರಿಗೆ ನೀಡುವ ಕೊಡುಗೆಗಳ ಬಗ್ಗೆ ಕರಪತ್ರಗಳನ್ನು ಹಂಚಲಾಯಿತು.
ಈ ವೇಳೆ ಮಾತನಾಡಿದ ಪಿ.ಜಿ.ಆರ್.ಸಿಂಧ್ಯಾ, ಇಂದಿನಿಂದ ಒಂದು ತಿಂಗಳ ಕಾಲ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿಕಾಸ ಪರ್ವ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಜನಾಶೀರ್ವಾದ ಮಾಡಿ ಕಳುಹಿಸಿದರೆ ನಗರದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತೇವೆ. ಹಿಂದೆ ಅಧಿಕಾರದಲ್ಲಿದ್ದಾಗ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ತಮಗೆ ಸಿಕ್ಕ ಸಮಯದಲ್ಲಿ ಬೆಂಗಳೂರನ್ನು ದೇಶದಲ್ಲೇ ಮಾದರಿ ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಈ ಕಾರ್ಯ ಮಾಡಲಿಲ್ಲ. ಬಿಜೆಪಿ, ಕಾಂಗ್ರೆಸ್ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ ಎಂದು ದೂರಿದರು.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾಮಗಾರಿ ಅವ್ಯವಹಾರಗಳ ಬಗ್ಗೆ ಸದನ ಸಮಿತಿ ವರದಿ ಕೊಟ್ಟ ನಂತರವೂ ಕಾಂಗ್ರೆಸ್ ಪಕ್ಷ ಅಶೋಕ್ ಖೇಣಿಯನ್ನು ಸೇರಿಸಿಕೊಂಡಿದೆ. ಇಂತಹ ಆರೋಪಿತರನ್ನು ನಮ್ಮ ಪಕ್ಷ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಟಿ.ಎ.ಶರವಣ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಬೆಂಗಳೂರನ್ನು ರಕ್ಷಿಸಲು ಇಂದಿನಿಂದ ಪಾದಯಾತ್ರೆಹಮ್ಮಿಕೊಂಡಿದ್ದೇವೆ. ಈ ಎರಡೂ ಪಕ್ಷಗಳಿಂದ ಲೂಟಿಯಾಗಿದೆಯೇ ಹೊರತು ಅಭಿವೃದ್ಧಿಯಾಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.
ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನಗರದಲ್ಲಿ ಏನು ಅಭಿವೃದ್ಧಿಯಾಗಿತ್ತು, ಮುಂದೆ ನಾವು ಯಾವಯಾವ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ ಎಂಬುದರ ಬಗ್ಗೆ ಪಾದಯಾತ್ರೆ ವೇಳೆ ನಗರದ ಜನತೆಗೆ ತಿಳಿಸುತ್ತೇವೆ ಎಂದರು.
ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು, ಕುಡಿಯುವ ನೀರಿಗೆ ಆದ್ಯತೆ ನೀಡುವುದು ನಮ್ಮ ಮುಖ್ಯ ಆದ್ಯತೆಯಾಗಿದೆ, ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದರು. ಅದನ್ನು ಜನ ಮರೆತಿಲ್ಲ ಎಂದು ಅವರು ತಿಳಿಸಿದರು.