ಬೆಂಗಳೂರು, ಅ.17- ನಾಡಹಬ್ಬ ದಸರಾ ಸಡಗರದಲ್ಲಿರುವ ಬೆಂಗಳೂರಿಗರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ..!
ಅಕ್ಟೋಬರ್ 29ರಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ದಸರಾ ಹಬ್ಬದ ನಂತರ ಮೊದಲ ಹಂತದಲ್ಲಿ 71 ಮನೆಗಳನ್ನು ನೆಲಸಮ ಮಾಡಲಿವೆ.
ಮಹದೇವಪುರದ ಒಟ್ಟು 226 ಪ್ರಕರಣಗಳಲ್ಲಿ 46 ಕಟ್ಟಡಗಳು, ದಕ್ಷಿಣ ವಲಯದಲ್ಲಿ 17 ಮನೆಗಳು, ಯಲಹಂಕದಲ್ಲಿ ಎಂಟು ಕಟ್ಟಡಗಳು, ಒಂದು ಫ್ಯಾಕ್ಟರಿ, ಒಂದು ಅಪಾರ್ಟ್ಮೆಂಟ್ ಹಾಗೂ ರಾಜರಾಜೇಶ್ವರಿನಗರದಲ್ಲಿರುವ ಒಂದು ಕಟ್ಟಡ ನೆಲಸಮವಾಗಲಿವೆ.
71 ಮನೆಗಳಷ್ಟೆ ಅಲ್ಲದೆ ಖಾಲಿ ನಿವೇಶನ, ಕೃಷಿ ಭೂಮಿ, ಕಾಂಪೌಂಡ್, ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗುವುದು.
ಇದರ ಜತೆಗೆ ಒತ್ತುವರಿಯಾಗಿರುವ ಮತ್ತಷ್ಟು ಆಸ್ತಿಗಳನ್ನು ಗುರುತಿಸಲು ಸರ್ವೆಯರ್ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಮಾರ್ಕಿಂಗ್ ಕಾರ್ಯ ಮುಗಿದ ಕೂಡಲೇ ಮತ್ತಷ್ಟು ಕಟ್ಟಡಗಳು ನೆಲಸಮವಾಗುವುದು ಖಚಿತಪಟ್ಟಿದೆ.
ರಾಜಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳನ್ನು ಗುರುತಿಸಲು ಕಳೆದ ಜೂ.14ರಿಂದ ಜು.21ರ ತನಕ ಸರ್ವೆ ನಡೆಸಿ 450 ಪ್ರಕರಣಗಳನ್ನು ಪತ್ತೆಹಚ್ಚಿ ಕೆಲವು ಪ್ರದೇಶಗಳಲ್ಲಿ ಮಾರ್ಕಿಂಗ್ ಕಾರ್ಯ ಪೂರ್ಣಗೊಳಿಸಲಾಗಿತ್ತು.
ಇದೀಗ 450 ಪ್ರಕರಣಗಳಲ್ಲಿ ಒತ್ತುವರಿಯಾಗಿರುವ 71 ಕಟ್ಟಡಗಳನ್ನು ನೆಲಸಮಗೊಳಿಸಲು ವೇದಿಕೆ ಸಿದ್ಧಗೊಂಡಿದ್ದು, ಎರಡನೆ ಹಂತದಲ್ಲಿ ಮತ್ತಷ್ಟು ಮಾರ್ಕಿಂಗ್ ಕಾರ್ಯ ಮಾಡಿ ನೂರಾರು ಕಟ್ಟಡಗಳ ಒತ್ತುವರಿಯನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ.
ನಗರದಲ್ಲಿ ಅತಿ ಹೆಚ್ಚು ಒತ್ತುವರಿಯಾಗಿರುವುದು ಮಹದೇವಪುರದಲ್ಲಿ.ಅಲ್ಲಿನ 226 ಪ್ರಕರಣಗಳಲ್ಲಿ ಮೊದಲನೆ ಹಂತದಲ್ಲಿ 46 ಕಟ್ಟಡ ನೆಲಸಮ ಮತ್ತು ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಅ.29ರಿಂದ ಆರಂಭವಾಗಲಿದೆ.
ಅದೇ ರೀತಿ ದಕ್ಷಿಣ ವಲಯದಲ್ಲಿ 17 ಮನೆಗಳು, ಯಲಹಂಕದ 202 ಪ್ರಕರಣಗಳಲ್ಲಿ ಏಳು ಮನೆ, ಒಂದು ಫ್ಯಾಕ್ಟರಿ, ಒಂದು ಅಪಾರ್ಟ್ಮೆಂಟ್ಅನ್ನು ತೆರವುಗೊಳಿಸಲಾಗುತ್ತಿದೆ.
ರಾಜರಾಜೇಶ್ವರಿನಗರದಲ್ಲಿ ಎರಡು ಕಟ್ಟಡಗಳು ಒತ್ತುವರಿಯಾಗಿದ್ದು, ಒಂದು ಕಟ್ಟಡದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಉಳಿದಿರುವ ಮತ್ತೊಂದು ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ.
ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರಿಗೋ ಶಿಕ್ಷೆ: ಕೆಲವು ಭೂಗಳ್ಳರು ಸರ್ಕಾರಿ ಭೂಮಿ ಒತ್ತುವರಿ ಮಾಡಿ ನಿವೇಶನ ನಿರ್ಮಿಸಿ ಅವುಗಳನ್ನು ಮಾರಾಟ ಮಾಡಿ ನೆಮ್ಮದಿಯಾಗಿದ್ದಾರೆ. ಆದರೆ, ಈ ಅನ್ಯಾಯದ ಬಗ್ಗೆ ಏನೂ ತಿಳಿಯದ ಅಮಾಯಕರು ಸಾಲಸೋಲ ಮಾಡಿ ನೆತ್ತಿ ಮೇಲೊಂದು ಸೂರು ಕಲ್ಪಿಸಿಕೊಂಡಿದ್ದರು.
ಆದರೆ, ಇದೀಗ ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರಿಗೋ ಶಿಕ್ಷೆ ಎನ್ನುವಂತೆ ಸಣ್ಣದೊಂದು ಗೂಡು ಕಟ್ಟಿಕೊಂಡು ನೆಮ್ಮದಿಯಾಗಿದ್ದ ಅಮಾಯಕರ ಕನಸಿನ ಗೋಪುರಗಳು ಭಗ್ನಗೊಳ್ಳುತ್ತಿವೆ.
ಬೃಹತ್ ಕಟ್ಟಡಗಳಿಲ್ಲ: ಮೊದಲ ಹಂತದಲ್ಲಿ ನೆಲಸಮಗೊಳ್ಳಲು ಸಿದ್ಧಗೊಂಡಿರುವ 71 ಕಟ್ಟಡಗಳಲ್ಲಿ ಯಾವುದೇ ಬೃಹತ್ ಕಟ್ಟಡಗಳಿಲ್ಲ. ಬದಲಿಗೆ ನೂರಾರು ಅಮಾಯಕರ ಸಣ್ಣಪುಟ್ಟ ಮನೆಗಳೇ ಇರುವುದು.
ಅಂದರೆ ದೊಡ್ಡ ದೊಡ್ಡ ವ್ಯಕ್ತಿಗಳು ಯಾವುದೇ ಒತ್ತುವರಿ ಮಾಡಿಕೊಂಡಿಲ್ಲವೆ ಎಂಬ ಸಾಮಾನ್ಯ ಪ್ರಶ್ನೆ ಎದುರಾಗುತ್ತದೆ.ಬಿಬಿಎಂಪಿ ಮತ್ತು ಜಿಲ್ಲಾಡಳಿತ ದೊಡ್ಡವರ ಒತ್ತುವರಿಯನ್ನು ಮರೆಮಾಚಿ ಸಣ್ಣಪುಟ್ಟ ಮನೆಗಳನ್ನು ಕೆಡವಿ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಎಷ್ಟೆಷ್ಟು ಒತ್ತುವರಿ: 2016-17ನೆ ಸಾಲಿನಲ್ಲಿ 1953 ಒತ್ತುವರಿ ಪ್ರಕರಣಗಳನ್ನು ಪತ್ತೆಹಚ್ಚಿ ಅವುಗಳಲ್ಲಿ 1225 ಒತ್ತುವರಿಯನ್ನು ತೆರವುಗೊಳಿಸಲಾಗಿತ್ತು. ನಂತರ ಮತ್ತೆ 562 ಒತ್ತುವರಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಬಾರಿಯೂ ಮಧ್ಯಮವರ್ಗದವರ ಮೇಲೆ ಗದಾಪ್ರಹಾರ ನಡೆಯುತ್ತಿದೆ.