ಬೆಂಗಳೂರು, ಅ.17- ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡದೆ ದೂರ ಉಳಿದಿರುವ ಕಾಂಗ್ರೆಸ್ ನಾಯಕರ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮುಂದಾಗಿದ್ದಾರೆ.
ಕಾಂಗ್ರೆಸ್ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.ಜೆಡಿಎಸ್ ಮಾಜಿ ಸಚಿವ ಎಲ್.ಆರ್.ಶಿವರಾಮೇಗೌಡರನ್ನು ಕಣಕ್ಕಿಳಿಸಿದೆ.ಆದರೆ, ಚುನಾವಣೆಯ ಮೈತ್ರಿಗೆ ಸ್ಥಳೀಯ ಕಾಂಗ್ರೆಸ್ನ ಬಹುತೇಕ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಪ್ರಚಾರದಿಂದ ದೂರ ಉಳಿದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿಮಾಡಿಕೊಂಡಿದೆ.ಕಾಂಗ್ರೆಸ್ನಿಂದ ಯಾರೂ ಸ್ಪರ್ಧಿಸಬೇಡಿ ಎಂದು ಹೇಳಿದೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಆದರೆ, ಜೆಡಿಎಸ್ಗೆ ಮತ ಹಾಕಿ ಎಂದು ಹೇಳಲಿಲ್ಲ. ಹಾಗಾಗಿ ನಾವು ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಮಗೆ ಕರೆ ಮಾಡಿದ ಜೆಡಿಎಸ್ ಅಭ್ಯರ್ಥಿ ಜತೆ ಸರಿಯಾಗಿ ಮಾತನಾಡದೆ ಅಸಹಕಾರ ತೋರಿದ್ದಾರೆ ಎನ್ನಲಾಗಿದೆ.
ಜೆಡಿಎಸ್ನ ಸಚಿವರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ನಾವೇಕೆ ನಿಮಗೆ ಬೆಂಬಲ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ರಾಜ್ಯದಲ್ಲಿ ದೋಸ್ತಿ ಇದ್ದರೂ ಮಂಡ್ಯದಲ್ಲಿ ರಾಜಕೀಯ ಕುಸ್ತಿ ಮುಗಿದಿಲ್ಲ. ಹೇಗಾದರೂ ಮಾಡಿ ಎರಡೂ ಪಕ್ಷಗಳು ಒಟ್ಟಾಗಿ ಪ್ರಚಾರ ನಡೆಸಿದರೆ ಮಾತ್ರ ಜೆಡಿಎಸ್ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಇಲ್ಲವಾದರೆ ಬಿಜೆಪಿ ದೋಸ್ತಿಗಳ ಒಡಕಿನ ಲಾಭ ಪಡೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವಿದೆ. ಹೀಗಾಗಿ ಕಾಂಗ್ರೆಸ್ ಸ್ಥಳೀಯ ನಾಯಕರನ್ನು ಸಮಾಧಾನಪಡಿಸಲು ಮುಂದಾಗಿದೆ.
ಐದೂ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಟ್ಟಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಈಗಾಗಲೇ ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ.ಅದರಂತೆ ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯವೂ ಆರಂಭವಾಗಿದೆ.ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಸ್ಥಳೀಯವಾಗಿ ಜೆಡಿಎಸ್ನ ಪ್ರಭಾವಿ ನಾಯಕರು ಇಲ್ಲದೇ ಇರುವುದರಿಂದ ಅಲ್ಲಿ ಕಾಂಗ್ರೆಸ್ ನಾಯಕರ ಅಬ್ಬರವೇ ಹೆಚ್ಚಾಗಿದೆ.
ಮಂಡ್ಯ, ರಾಮನಗರ ಕ್ಷೇತ್ರವೆರಡರಲ್ಲೂ ಸ್ಥಳೀಯ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಾಮನಗರದ ನಾಯಕರನ್ನು ಹೈಕಮಾಂಡ್ ಸಮಾಧಾನ ಪಡಿಸಿದೆ.ಆದರೆ, ಮಂಡ್ಯಾದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಬಂಡೆದಿದ್ದಾರೆ.
ಎಲ್.ಆರ್.ಶಿವರಾಮೇಗೌಡರು ದೂರವಾಣಿ ಮೂಲಕ ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರನ್ನು ಸಂಪರ್ಕಿಸಿ ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ.ಆದರೆ, ಕೆಳ ಹಂತದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ತೊಡೆ ತಟ್ಟುತ್ತಿದ್ದಾರೆ.
ಹೀಗಾಗಿ ಸಕ್ಕರೆ ನಾಡಿನಲ್ಲಿ ದೋಸ್ತಿಗಳ ನಡುವಿನ ಕಹಿ ಕಡಿಮೆಯಾಗಿಲ್ಲ. ಇಂದು ಸಂಜೆ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದು, ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.ಅದು ಯಶಸ್ವಿಯಾದರೆ ಮಿತ್ರಕೂಟದ ಅಭ್ಯರ್ಥಿಯ ಬಲ ಹೆಚ್ಚಾಗುತ್ತದೆ.ಇಲ್ಲವಾದರೆ ಮಂಡ್ಯ ಮತದಾರರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.