ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವುದಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಿಸಿದ್ಧಾರೆ. ದೇವರಿಗೆ ಯಾವುದೇ ಲಿಂಗಭೇದವಿಲ್ಲ. ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರ ವಾದದಲ್ಲೂ ಯಾವುದೇ ಹುರುಳಿಲ್ಲ ಎಂದು ಸ್ವಾಮಿ ಟೀಕಿಸಿದ್ದಾರೆ. ಪ್ರತಿಭಟನಾನಿರತ ಹಿಂದೂ ಸಂಘಟನೆಗಳ ಇಬ್ಬಂದಿತನವನ್ನು ತ್ರಿವಳಿ ತಲಾಖ್ ವಿಚಾರ ಉಲ್ಲೇಖಿಸಿ ಅವರು ಬಯಲಿಗೆಳೆದಿದ್ದಾರೆ.
“ಸುಪ್ರೀಮ್ ಕೋರ್ಟ್ ಈಗಾಗಲೇ ತೀರ್ಪು ಕೊಟ್ಟಾಗಿದೆ. ಈಗ ನೀವು ಸಂಪ್ರದಾಯದ ಕಾರಣ ಕೊಡುತ್ತಿದ್ದೀರಿ. ತ್ರಿವಳಿ ತಲಾಖ್ ಕೂಡ ಒಂದು ಸಂಪ್ರದಾಯವೇ ಆಗಿತ್ತು. ಅದನ್ನು ನಿಷೇಧಿಸಿದಾಗ ಪ್ರತಿಯೊಬ್ಬರು ಸ್ವಾಗಸಿದ್ದರು. ಈಗ ಅದೇ ಹಿಂದೂಗಳು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಮಾಜಿ ಕೇಂದ್ರ ಸಚಿವರೂ ಆಗಿರುವ ಸುಬ್ರಮಣಿಯನ್ ಸ್ವಾಮಿ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಕೆಲ ಹಿಂದೂಗಳಿಗೆ ಬ್ರೇನ್ವಾಶ್ ಆಗಿದೆ”:
ಕಮ್ಯೂನಿಸ್ಟರ ಆಡಳಿತದಿಂದಾಗಿ ಕೇರಳದ ಕೆಲ ಹಿಂದೂಗಳಿಗೆ ಕಮ್ಯೂನಿಸ್ಟರಂತೆಯೇ ಬ್ರೈನ್ವಾಶ್ ಆಗಿದೆ ಎಂದೂ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. “ಶಬರಿಮಲೆಯಲ್ಲಿ ಪೂಜೆ ಸಲ್ಲಿಸಲು ಬಯಸುವ ಮಹಿಳೆಯರ ಪ್ರಯತ್ನಕ್ಕೆ ಕೇರಳದ ಕೆಲ ಹಿಂದೂಗಳು ಅಡ್ಡಿಯಾಗಿದ್ದಾರೆ. ಹಲವು ವರ್ಷಗಳ ಕಮ್ಯೂನಿಸ್ಟ್ ಆಡಳಿತದಲ್ಲಿದ್ದ ಇವರಿಗೆ ತಮ್ಮ ಅಸಂಬದ್ಧ ನೀತಿಯನ್ನು ಎಲ್ಲಾ ಕಾಲಕ್ಕೂ ಅನ್ವಯಿಸುವ ಪ್ರವೃತ್ತಿ ಬೆಳೆದುಬಿಟ್ಟಿದೆ” ಎಂದು ಕಠಿಣವಾಗಿಯೇ ಟ್ವೀಟ್ ಮಾಡಿ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಅಜ್ಞಾನ ಮತ್ತು ಪುನರುತ್ಥಾನದ ನಡುವಿನ ಯುದ್ಧ:
ಶಬರಿಮಲೆ ಪ್ರತಿಭಟನಾಕಾರರ ವಿರುದ್ಧ ಇನ್ನಷ್ಟು ವಾಗ್ದಾಳಿ ನಡೆಸಿದ ಸುಬ್ರಮಣಿಯನ್ ಸ್ವಾಮಿ ಇದು ಅಜ್ಞಾನ ಹಾಗೂ ಧರ್ಮ ಪುನರುತ್ಥಾನದ ನಡುವಿನ ಯುದ್ಧವೆಂದು ಬಣ್ಣಿಸಿದ್ದಾರೆ. “ಈಗ ಹಿಂದೂ ಧರ್ಮದ ಪುನಶ್ಚೇತನವಾಗಬೇಕಿದೆ. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಅಂತ್ಯವಾಗಬೇಕು. ಎಲ್ಲಾ ಹಿಂದೂಗಳು ಒಂದೇ ಎನಿಸಬೇಕು. ಯಾಕೆಂದರೆ ಮೊದಲಿನಂತೆ ಈಗ ಯಾವ ಬ್ರಾಹ್ಮಣನೂ ಬೌದ್ಧಿಕ ವ್ಯಕ್ತಿಯಾಗಿ ಉಳಿದಿಲ್ಲ. ಅವರು ಸಿನಿಮಾದಲ್ಲಿದ್ದಾರೆ. ವ್ಯಾಪಾರದಲ್ಲಿದ್ದಾರೆ. ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನ್ಮದಲ್ಲಿ ಜಾತಿ ಬರುತ್ತದೆ ಎಂದು ಎಲ್ಲಿ ಬರೆದಿದೆ? ಶಾಸ್ತ್ರಗಳನ್ನು ಯಾವಾಗ ಬೇಕಾದರೂ ತಿದ್ದಬಹುದು,” ಎಂದು ವಿರಾಟ್ ಹಿಂದೂ ಸಂಗಮ್ ಸಂಘಟನೆಯ ಮುಖಂಡರೂ ಆಗಿರುವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.