ಬೆಂಗಳೂರು, ಅ.16-ಮುಂಬರುವ ಲೋಕಸಭಾ ಚುನಾವಣೆಗೆ ನಗರ ಜಿಲ್ಲಾಡಳಿತ ಸಜ್ಜಾಗಿದ್ದು, ಇವಿಎಂ ಮತ್ತು ವಿವಿ ಪ್ಯಾಟ್ಗಳ ಪರಿಶೀಲನಾ ಕಾರ್ಯ ನಿನ್ನೆಯಿಂದಲೇ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ವಿಜಯ್ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮಲ್ಲಿರುವ ಇವಿಎಂ, ವಿವಿ ಪ್ಯಾಟ್ಗಳ ಉಪಯೋಗಕ್ಕೂ ಮುನ್ನ ಪರಿಶೀಲನೆ ನಡೆಸಲಾಗುತ್ತದೆ. ಎಫ್ಎಲ್ಸಿ ಪರೀಕ್ಷೆ ನಿನ್ನೆಯಿಂದಲೇ ಆರಂಭವಾಗಿದೆ ಎಂದರು.
ಒಟ್ಟು 32,009,42 ಮತದಾರರಿದ್ದಾರೆ. 5225 ಬ್ಯಾಲೆಟ್ ಮಿಷನ್ ಬಳಸಲಾಗುತ್ತದೆ. 4276 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ. 3985 ಕಂಟ್ರೋಲ್ ಯುನಿಟ್ಗಳಿರುತ್ತವೆ. ಬಿಇಎಲ್ನಿಂದ ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಪಾರದರ್ಶಕವಾಗಿರಬೇಕು. ಹಾಗಾಗಿ ರಾಜಕೀಯ ಪಕ್ಷಗಳವರಿಗೆ ಪರಿಶೀಲನೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗದಿಂದಲೂ ಸ್ಪಷ್ಟ ಸಂದೇಶ ಬಂದಿದೆ. ಚುನಾವಣೆಗೆ ಸ್ಪರ್ಧಿಸುವವರೂ ಬಂದು ತಪಾಸಣೆ ಮಾಡಬಹುದಾಗಿದೆ ಎಂದು ತಿಳಿಸಿದರು.