ಬೆಂಗಳೂರು, ಅ.16-ಮಿನಿ ಮಹಾಸಮರವೆಂದೇ ಬಿಂಬಿತವಾಗಿರುವ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಯಕರ ಸ್ವಪ್ರತಿಷ್ಠೆಗಾಗಿ ಕಾಂಗ್ರೆಸ್ ಹಿತವನ್ನು ಬಲಿ ಕೊಡಲಾಗಿದೆ ಎಂಬ ಆಕ್ಷೇಪಗಳು ಕೇಳಿಬರಲಾರಂಭಿಸಿವೆ.
ಬಳ್ಳಾರಿ, ಶಿವಮೊಗ್ಗ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ತಪ್ಪು ಹೆಜ್ಜೆ ಹಿಟ್ಟಿದೆ ಎಂಬ ಅಸಮಾಧಾನಗಳು ಒಳಗೊಳಗೆ ಕುದಿಯುತ್ತಿದೆ. ಬಳ್ಳಾರಿ ಜಿಲ್ಲೆ ಲೋಕಸಭೆ ಕ್ಷೇತ್ರ ಚುನಾವಣೆಗೆ ಉಸ್ತುವಾರಿ ನಾಯಕರಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು.
ಆದರೆ, ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ಗೆ ಟಿಕೆಟ್ ಕೊಟ್ಟರೆ ಈಗಾಗಲೇ ಜಾರಕಿಹೊಳಿ ಸಹೋದರರ ಬಣದಲ್ಲಿ ಗುರುತಿಸಿಕೊಂಡಿರುವ ನಾಗೇಂದ್ರ ಅವರಿಗೆ ಮಣೆಹಾಕಿದಂತಾಗುತ್ತದೆ. ಇದರಿಂದ ನಮಗೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ನ ಹಲವಾರು ನಾಯಕರು ವಿ.ಎಸ್.ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಸ್ಥಳೀಯವಾಗಿ ಬಹುತೇಕ ಶಾಸಕರು ಉಗ್ರಪ್ಪ ಅವರ ಪರವಾಗಿ ಕೆಲಸ ಮಾಡಲು ಸಿದ್ಧರಿಲ್ಲ. ಅಭ್ಯರ್ಥಿ ಆಯ್ಕೆ ಆದ ಬೆನ್ನಲ್ಲೇ ಭಿನ್ನ ಶಾಸಕರ ಸಂಧಾನ ಸಭೆ ನಡೆಸಬೇಕಾದ ಅನಿವಾರ್ಯತೆ ಇದೆ.
ನಾಯಕರು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಕ್ಷೇತ್ರವನ್ನು ನಿರಾಯಾಸವಾಗಿ ಬಿಟ್ಟುಕೊಡುವ ರೀತಿ ವರ್ತಿಸುತ್ತಿದ್ದಾರೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನಗಳಿಸಿದ್ದ ಕಾಂಗ್ರೆಸ್ ಏಕಾಏಕಿ ಶಸ್ತ್ರ ತ್ಯಾಗ ಮಾಡಿದ್ದು, ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಸುಮಾರು ನಾಲ್ಕು ಲಕ್ಷ ಈಡಿಗ ಸಮುದಾಯದ ಮತಗಳಿವೆ ಎಂಬ ಒಂದೇ ಕಾರಣಕ್ಕೆ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮಧುಬಂಗಾರಪ್ಪ ಅವರ ಸಹೋದರ ಕುಮಾರ್ಬಂಗಾರಪ್ಪ ಅವರು ಕಾಂಗ್ರೆಸ್ನಲ್ಲಿದ್ದಾಗ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರು. ಈಗ ಕುಮಾರ್ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಆದರೆ, ಮಧುಬಂಗಾರಪ್ಪ ಅವರ ವಿರುದ್ಧ ಅಂದು ಸಡ್ಡು ಹೊಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಳೆಯದನ್ನೆಲ್ಲಾ ಮರೆತು ಚುನಾವಣೆಯಲ್ಲಿ ಮಧುಬಂಗಾರಪ್ಪ ಅವರ ಪರ ಕೆಲಸ ಮಾಡುತ್ತಾರೆಂಬ ನಿರೀಕ್ಷೆಗಳು ಕೈಗೂಡುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕಳೆದ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರನ್ನು ಕಣಕ್ಕಿಳಿಸಿ ಖುದ್ದಾಗಿ ಶಿವರಾಜ್ಕುಮಾರ್ ಅವರೇ ಪ್ರಚಾರ ಮಾಡಿದ್ದರೂ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಹಿಂದಿನ ಯಾವುದೇ ಲೆಕ್ಕಾಚಾರಗಳನ್ನೂ ಪರಿಗಣಿಸದೆ ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಯುದ್ಧಕ್ಕೆ ಮೊದಲೇ ಶರಣಾಗತಿಯಾದಂತಾಗಿದೆ. ಮಂಡ್ಯ, ರಾಮನಗರ ಕ್ಷೇತ್ರವನ್ನು ಬೇಷರತ್ತಾಗಿ ಬಿಟ್ಟುಕೊಡಲಾಗಿದೆ. ಈಗ ಶಿವಮೊಗ್ಗವನ್ನು ಬಿಟ್ಟುಕೊಟ್ಟಿದ್ದಾಯಿತು. ಇನ್ನು ಬಳ್ಳಾರಿ ಕ್ಷೇತ್ರದ ಫಲಿತಾಂಶ ಅಯೋಮಯವಾಗಿದೆ. ಯಥಾ ಪ್ರಕಾರ ಜಮಖಂಡಿ ಮಾತ್ರ ಕಾಂಗ್ರೆಸ್ ಪಾಲಿಗೆ ಗಟ್ಟಿ ಎಂಬಂತಾಗಿದೆ ಎಂದು ನಾಯಕರು ವಿಶ್ಲೇಷಿಸುತ್ತಿದ್ದಾರೆ.
ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಎದುರಿಸಲು ಆಗುವುದಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೊಂದಿಲ್ಲ ಎಂಬ ವ್ಯಾಖ್ಯಾನಗಳು ಕೇಳಿಬರಲಾರಂಭಿಸಿವೆ.
ಕೆಲವು ನಾಯಕರು ತಮ್ಮ ಸ್ವಹಿತಾಸಕ್ತಿಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಿಕೊಡುತ್ತಿದ್ದಾರೆ. ಪಕ್ಷ ಉಳಿಸಬೇಕಾದ ಮುಖ್ಯಸ್ಥರು ಅಂತಹ ನಾಯಕರ ಜತೆ ಸೇರಿಕೊಂಡು ತಮ್ಮ ಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ.
ಇನ್ನು ಸರ್ಕಾರದ ಭಾಗವಾಗಿರುವವರು ಇದ್ದಷ್ಟು ದಿನ ಅಧಿಕಾರ ನಡೆಯಲಿ ಎಂಬ ಧೋರಣೆಯಲ್ಲಿದ್ದಾರೆ. ಇವೆಲ್ಲವುಗಳ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರು ಅತಂತ್ರಕ್ಕೆ ಸಿಲುಕಿದ್ದು, ಮುಂದೇನು ಎಂಬ ಚಿಂತೆಗೊಳಗಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲೂ ರಾಜ್ಯ ನಾಯಕರು ಇದೇ ನಿಲುವುಗಳಿಗೆ ಅಂಟಿಕೊಂಡು ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸನ್ನು ಅಡವಿಟ್ಟರೆ ಅಲ್ಲಿಗೆ ಪಕ್ಷದ ಭವಿಷ್ಯ ತಮಿಳುನಾಡಿನ ಕಾಮ್ರಾಜ್ ಕಾಂಗ್ರೆಸ್ನಂತಾಗುತ್ತದೆ. ಲೋಕಸಭೆ ಚುನಾವಣೆ ನಂತರ ಸರ್ಕಾರದ ಭವಿಷ್ಯ ಏನಾಗುತ್ತದೋ ಗೊತ್ತಿಲ್ಲ. ಒಟ್ಟಾರೆ ಬೆಳವಣಿಗೆಗಳು ಮತ್ತೊಮ್ಮೆ ಕಾಂಗ್ರೆಸನ್ನು ಅಧೋಗತಿಯತ್ತ ತಲುಪಿಸಿಬಿಡುತ್ತವೆ ಎಂಬ ಆತಂಕವನ್ನು ಕೆಲವು ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.