ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಬೆಂಗಳೂರು, ಅ.16- ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಭರಾಟೆ ಬಿರುಸಾಗಿರುವಂತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿರುವುದು ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ.
ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಿ ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರ್ಪಡೆಯಾದ ನಿವೃತ್ತ ವಾಣಿಜ್ಯಾಧಿಕಾರಿ ಡಾ.ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿರುವುದರಿಂದ ಜಿಲ್ಲೆಯ ಅನೇಕ ಮುಖಂಡರು ನಾಯಕರ ನಿರ್ಧಾರಕ್ಕೆ ಬೇಸರಗೊಂಡಿದ್ದಾರೆ.

ನಿನ್ನೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲೆಯ ಅನೇಕ ನಾಯಕರು ಗೈರು ಹಾಜರಾಗಿದ್ದರು. ಪಕ್ಷದ ಮುಖಂಡ ಆರ್.ಅಶೋಕ್, ಸಂಸದ ಪ್ರತಾಪ್‍ಸಿಂಹ ಸೇರಿದಂತೆ ಮತ್ತಿತರರ ಮನವೊಲಿಕೆ ನಡುವೆಯೂ ಮುನಿಸು ಮಾತ್ರ ಶಮನಗೊಂಡಿಲ್ಲ.
ರಾಜ್ಯಾದ್ಯಂತ ಯಡಿಯೂರಪ್ಪನವರ ಸೂಚನೆ ಮೇರೆಗೆ ಭಿನ್ನಮತೀಯರನ್ನು ಮನವೊಲಿಸುವ ಕಸರತ್ತು ನಡೆದಿದೆಯಾದರೂ ಈವರೆಗೂ ಯಾವುದೇ ಫಲಕೊಟ್ಟಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ನಾಯಕರು ಸೂಚನೆ ಕೊಟ್ಟಿದ್ದರೂ ಜಿಲ್ಲಾ ಮುಖಂಡರು ಮಾತ್ರ ಇತ್ತಕಡೆ ಸುಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದ ಬಿಜೆಪಿಗೆ ಅದರ ಲೆಕ್ಕಾಚಾರವೇ ಬುಡಮೇಲಾಗಿದೆ.
ಯಾವುದೇ ಒಬ್ಬ ನಾಯಕರು ಬೆಂಬಲ ನೀಡುವುದಾಗಲಿ, ಇಲ್ಲವೇ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳದೇ ಇರುವುದು ಕಮಲ ನಾಯಕರಿಗೆ ಇರಿಸು-ಮುರಿಸು ತಂದಿದೆ.

ಇತ್ತ ಗಣಿ ಜಿಲ್ಲೆ ಬಳ್ಳಾರಿ ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಶ್ರೀನಿವಾಸ್‍ಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಪಕ್ಷದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದನ್ನು ಸಾಬೀತು ಮಾಡಿದೆ.

ಸ್ಥಳೀಯ ನಾಯಕರು ಮತ್ತು ಮುಖಂಡರ ವಿರೋಧದ ನಡುವೆಯೂ ಶ್ರೀನಿವಾಸಮೂರ್ತಿ ತಮ್ಮ ನಿರ್ಧಾರವನ್ನು ಬದಲಾಯಿಸದೆ ಕಣದಲ್ಲೇ ಉಳಿಯುತ್ತೇನೆ ಎಂದು ಹಠ ಹಿಡಿದಿರುವುದು ಕಮಲ ನಾಯಕರಿಗೆ ತಲೆನೋವಾಗಿದೆ.
ತಕ್ಷಣವೇ ಅವರನ್ನು ಮನವೊಲಿಸುವಂತೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಶ್ರೀರಾಮುಲು, ಸೋಮಶೇಖರರೆಡ್ಡಿ ಸೇರಿದಂತೆ ಇತರರು ಸೂಚನೆ ಕೊಟ್ಟಿದ್ದರು.

ಆದರೆ, ಶ್ರೀನಿವಾಸಮೂರ್ತಿ ಬಂಡಾಯ ಸಾರಿರುವುದು ಬಿಜೆಪಿಗೆ ನಡುಕ ಉಂಟು ಮಾಡಿದೆ. ಏಕೆಂದರೆ ಜಿದ್ದಾಜಿದ್ದಿನ ಕಣದಲ್ಲಿ ಒಂದಿಷ್ಟು ಮತಗಳು ಆಚೆ-ಈಚೆಯಾದರೆ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಆತಂಕ ಎದುರಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ವಿಧಾನಸಭೆ ಉಪ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಮತ್ತೆ ಬಿರುಕುಕಂಡಿದೆ. ಕಳೆದ ಬಾರಿ ಟಿಕೆಟ್ ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಧಿಕೃತ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಸೋಲಿಗೆ ಕಾರಣರಾಗಿದ್ದ ಸಂಗಮೇಶ ನಿರಾಣಿ ಕಳೆದ ರಾತ್ರಿ ಪ್ರತ್ಯೇಕ ಸಭೆ ನಡೆಸಿರುವುದು ಬಿಜೆಪಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪವಾಗಿದೆ.

ಸಂಗಮೇಶ್ ನಿರಾಣಿ ಸೇರಿದಂತೆ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಸ್ಥಳೀಯ ನಾಯಕರ ಜತೆ ಸಂಧಾನ ನಡೆಸುವಂತೆ ಬಿ.ಎಸ್.ಯಡಿಯೂರಪ್ಪ ಸಂಧಾನಕಾರರನ್ನಾಗಿ ಪಕ್ಷದ ಹಿರಿಯ ನಾಯಕರ ಅರವಿಂದ ಲಿಂಬಾವಳಿಯವರನ್ನು ಜಮಖಂಡಿಗೆ ಕಳುಹಿಸಿಕೊಟ್ಟಿದ್ದರು.

ಆದರೆ, ಕಳೆದ ರಾತ್ರಿ ಸಂಗಮೇಶ್ ನಿರಾಣಿ ಇದ್ದಕ್ಕಿದ್ದಂತೆ ಬೆಂಬಲಿಗರ ಸಭೆ ನಡೆಸಿರುವುದು ತಳಮಳಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಅವರ ಮನವೊಲಿಸಲು ಸಹೋದರ ಬಿಳಗಿ ಶಾಸಕ ಮುರುಗೇಶ್ ನಿರಾಣಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಕಮಲಪಡೆಗೆ ಮೂರು ಕ್ಷೇತ್ರದಲ್ಲಿ ಭಿನ್ನಮತ ಜೋರಾಗಿಯೇ ತಟ್ಟಿರುವುದು ಮುಂದೆ ಫಲಿತಾಂಶದಲ್ಲಿ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ