ಬೆಂಗಳೂರು, ಅ.16-ದೇಶದ ಏಕತೆಗೆ ಶ್ರಮಿಸಿದ ಕೇಂದ್ರದ ಪ್ರಪ್ರಥಮ ಗೃಹ ಸಚಿವ ಸರದಾರ್ ವಲ್ಲಭ ಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಇದೇ 31ರಂದು ಗುಜರಾತ್ನಲ್ಲಿ ಅನಾವರಣಗೊಳ್ಳಲಿದೆ.
ಗುಜರಾತ್ನ ನರ್ಮದಾ ಜಿಲ್ಲೆಯ ಸರದಾರ್ ಸರೋವರ್ ಡ್ಯಾಂನಲ್ಲಿ ನಿರ್ಮಾಣ ಮಾಡಿರುವ 182 ಮೀಟರ್ ಎತ್ತರದ ವಿಶ್ವದ ಅತಿದೊಡ್ಡ ಪ್ರತಿಮೆ ಎನಿಸಿರುವ ಸರದಾರ್ ವಲ್ಲಭಭಾಯಿ ಪಟೇಲ್ ಅವರ ಈ ಪ್ರತಿಮೆಯನ್ನು ಅ.31ರಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಿದ್ದಾರೆ.
ಈ ಕುರಿತು ಗುಜರಾತ್ನ ಇಂಧನ ಸಚಿವ ಸೌರಭ್ ಭಾಯಿ ಪಟೇಲ್ ಸುದ್ದಿಗೋಷ್ಠಿ ನಡೆಸಿ, ಸುಮಾರು ಮೂರು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಪ್ರತಿಮೆ ಭಾರತದ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಆಗಲಿದೆ ಎಂದು ಹೇಳಿದರು.
ನರ್ಮದಾ ನದಿ ದಂಡೆ ಮೇಲೆ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಅರ್ಜೆಂಟೈನಾದ ರಾಜಧಾನಿ ರಿಯೊ ಡಿ ಜಿನೆರೊದಲ್ಲಿ ನಿರ್ಮಾಣ ಮಾಡಿರುವ ಪ್ರತಿಮೆಗಿಂತ ಮೂರು ಪಟ್ಟು ದೊಡ್ಡದಾಗಿದೆ. 2013ರಿಂದ ಒಟ್ಟು ಐದು ವರ್ಷಗಳ ಕಾಲ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಏಕತಾ ಟ್ರಸ್ಟ್ ಮೂಲಕ ಇದನ್ನು ನಿರ್ಮಾಣ ಮಾಡಲಾಗಿದ್ದು, ಐದು ಸಾವಿರ ಮೆಟ್ರಿಕ್ ಟನ್ ಕಬ್ಬಿಣವನ್ನು ಜನರು ದೇಣಿಗೆಯಾಗಿ ನೀಡಿದ್ದಾರೆ. ಪ್ರತಿಮೆ ಕೆಳಭಾಗದಲ್ಲಿ ಸರದಾರ್ ಪಟೇಲ್ ಕುರಿತ ದೊಡ್ಡದಾದ ಮ್ಯೂಜಿಯಂ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಬೃಹದಾಕಾರವಾದ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ ಕನಿಷ್ಠ 15ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಿಂದಲೂ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿನ್ನೆ ರಾತ್ರಿ ರಾಜ್ಯಪಾಲ ವಿ.ಆರ್.ವಾಲ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಮುಖ್ಯಮಂತ್ರಿ ಅವರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿದೆ. ರಾಜ್ಯದ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಚಿವರು ಮನವಿ ಮಾಡಿದರು.
ಇಲ್ಲಿ ಎಲ್ಲಾ ರಾಜ್ಯಗಳಿಂದಲೂ ಭವನಗಳನ್ನು ನಿರ್ಮಾಣ ಮಾಡಿಕೊಳ್ಳಲು ನಿವೇಶನವನ್ನು ಮೀಸಲಿಡಲಾಗಿದೆ. ಕರ್ನಾಟಕದಿಂದಲೂ ಭವನ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳ ತಂಡವನ್ನು ಕಳುಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಭವನ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. ಯಾವುದೇ ರಾಜ್ಯಗಳು ಬಂದರೂ ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ರಾಜಕೀಯ ಷಡ್ಯಂತ್ರ:
ಇನ್ನು ಗುಜರಾತ್ನಿಂದ ಉತ್ತರ ಪ್ರದೇಶ, ಬಿಹಾರದ ಜನರನ್ನು ಬೆದರಿಸಿ ಕಳುಹಿಸುವ ಕುತಂತ್ರದ ಹಿಂದೆ ರಾಜಕೀಯ ಷಡ್ಯಂತ್ರ ನಡೆದಿದೆ. ಕಳೆದ 50 ವರ್ಷಗಳಿಂದ ನೆಮ್ಮದಿಯಾಗಿದ್ದವರನ್ನು ಏಕಾಏಕಿ ವದಂತಿಗಳನ್ನು ಹಬ್ಬಿಸಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ವಲಸೆ ಹೋಗಿರುವವರ ಸಂಖ್ಯೆ ಶೇ.1ರಷ್ಟು ಇರಬಹುದು. ಅಲ್ಲದೆ ದಸರಾ, ದುರ್ಗಾಪೂಜೆ ಸಂದರ್ಭದಲ್ಲಿ ಪ್ರತಿ ವರ್ಷ ಜನ ಹೋಗುವುದು ಸರ್ವೆ ಸಾಮಾನ್ಯ. ಹೋದವರು ಮತ್ತೆ ಮರಳಿ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಟೇಲ್ ಸಮುದಾಯದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ಪ್ರತಿಭಟನೆಗಳು ಬರುತ್ತವೆ. ಹೋಗುತ್ತವೆ. ಕೊನೆಗೆ ತಣ್ಣಗಾಗುತ್ತವೆ. ಇವೆಲ್ಲ ಮಾಮೂಲಿ ಎಂದರು.