ಕೊಳಚೆ ನೀರು ಶೇಖರಿಸಲು ನಿರ್ಮಿಸಿರುವ ಟ್ಯಾಂಕ್ ತೆರವಿಗೆ ಒತ್ತಾಯ

Varta Mitra News

ಬೆಂಗಳೂರು, ಅ.16- ಮಹದೇವಪುರ ವಿಧಾನಸಭಾ ಕ್ಷೇತ್ರದ ದೇವರಬಿಸನಹಳ್ಳಿ ಗ್ರಾಮದ ಕೊಳಚೆ ನಿರ್ಮೂಲನ ಮಂಡಳಿಗೆ ಸೇರಿದ ಸರ್ವೆ ನಂ.15 ಮತ್ತು 16ರ ಜಾಗವನ್ನು ಖಾಸಗಿ ಬಿಲ್ಡರ್ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕೊಳಚೆ ನೀರು ಮತ್ತು ಶೌಚಾಲಯ ನೀರನ್ನು ಶೇಖರಿಸಲು ನಿರ್ಮಿಸಿರುವ ಟ್ಯಾಂಕರನ್ನು ತೆರವುಗೊಳಿಸಬೇಕೆಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಮಹಿಳಾ ಘಟಕ ಒತ್ತಾಯಿಸಿದೆ.

ನಗರದಲ್ಲಿಂದು ಪ್ರತಿಭಟನೆ ನಡೆಸಿದ ಸೇನೆಯ ಪದಾಧಿಕಾರಿಗಳು, ಈ ಕೂಡಲೇ ಜಾಗವನ್ನು ತೆರವುಗೊಳಿಸಿ ಬಡವರಿಗೆ ನೀಡಬೇಕು. ಈ ಸರ್ವೆ ನಂಬರ್‍ನಲ್ಲಿ ಹಕ್ಕು ಪತ್ರ ನೀಡಲಾಗಿದೆ. ಖಾತೆ ಮಾಡಿಸಿಕೊಳ್ಳಲು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರುಪೇಕ್ಷಣಾ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರ ಹಾಗೂ ಸುತ್ತಮುತ್ತಲಿನ ಬಡವರು ವಸತಿಗಾಗಿ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಈಡೇರಿಲ್ಲ. ಅಧಿಕಾರಿಗಳ ನಿಧಾನಗತಿಯಿಂದಾಗಿ ಸರ್ಕಾರಿ ಭೂಮಿಗಳನ್ನು ಉಳ್ಳವರು ಕಬಳಿಸುತ್ತಿದ್ದಾರೆ. ಬಿಡಿಎ, ರಾಜೀವ್‍ಗಾಂಧಿ ವಸತಿ ಅಭಿವೃದ್ಧಿ ನಿಗಮ, ಕೊಳಚೆ ನಿರ್ಮೂಲನ ಮಂಡಳಿಗಳು ಸಹ ಜನಸಾಮಾನ್ಯರ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈ ಕೂಡಲೇ ಸರ್ಕಾರ ಇತ್ತ ಗಮನವಹಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಡವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಮಹಿಳಾ ಘಟಕದ ಅಧ್ಯಕ್ಷೆ ಮುನಿಯಲ್ಲಮ್ಮ ಅವರ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ಜಿಗಣಿ ಶಂಕರ್, ಕೃಷ್ಣಪ್ಪ, ಶಾಮಣ್ಣ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ