ಬೆಂಗಳೂರು, ಅ.12- ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮಹಾಪೌರರ ಸ್ಥಾನದ ಮೇಲೆ ಪಕ್ಷೇತರ ಸದಸ್ಯರು ಕಣ್ಣಿಟ್ಟಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ ಆರು ಮಂದಿ ಸದಸ್ಯರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆ ಭರವಸೆಗೆ ನಾವು ಈಗಲೂ ಬದ್ಧರಾಗಿದ್ದೇವೆ ಎಂದು ಹೇಳಿದರು.
ರಮಿಳಾ ನಿಧನರಾಗುತ್ತಿದ್ದಂತೆ ಪಕ್ಷೇತರರ ಆರು ಮಂದಿ ಸದಸ್ಯರು ಖಾಸಗಿ ಹೊಟೇಲ್ನಲ್ಲಿ ಸಭೆ ನಡೆಸಿ ಉಪಮೇಯರ್ ಸ್ಥಾನ ತಮಗೇ ನೀಡಬೇಕೆಂದು ಒತ್ತಾಯಿಸಿರುವುದು ಸರಿಯಾದ ಕ್ರಮ ಅಲ್ಲ ಎಂದರು.
ಉಪಮೇಯರ್ ಸ್ಥಾನ ಜೆಡಿಎಸ್ಗೇ ಮೀಸಲು. ನಮ್ಮ ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಯೇ ಉಪಮೇಯರ್ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ತೆರೆಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಜೆಡಿಎಸ್ನವರೇ ಇದ್ದಾರೆ. ಮುಂದೆಯೂ ಕೂಡ ಈ ಸ್ಥಾನ ಜೆಡಿಎಸ್ಗೇ ಇರಲಿದೆ. ಪಕ್ಷೇತರರಿಗೆ ಯಾವ ಸ್ಥಾಯಿ ಸಮಿತಿ ಬಿಟ್ಟುಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ನೇತ್ರಾ ನಾರಾಯಣ್ ಹೇಳಿದರು.