ಮಂಡ್ಯ ಅಭ್ಯರ್ಥಿ ಆಯ್ಕೆ ಹೊಣೆ ದೇವೇಗೌಡರಿಗೆ

ಬೆಂಗಳೂರು, ಅ.12- ಮಂಡ್ಯ ಲೋಕಸಭೆ ಉಪಚುನಾವಣೆ ಪಕ್ಷದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ಅಧಿಕೃತ ಅಭ್ಯರ್ಥಿ ಯಾರೆಂಬುದನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಉದ್ದೇಶಿಸಲಾಗಿದೆ. ವಿದೇಶ ಪ್ರವಾಸ ಮುಗಿಸಿ ಮರಳಿದ ನಂತರ ಅವರ ಅಭಿಪ್ರಾಯವನ್ನು ಗೌಡರು ಪಡೆಯಲಿದ್ದಾರೆ. ಒಂದು ವೇಳೆ ಸ್ಪರ್ಧೆ ಮಾಡಲು ಹಿಂದೆ ಸರಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ಜೆಡಿಎಸ್ ನಿರ್ಧರಿಸಿದೆ.

ನಿನ್ನೆ ತಡ ರಾತ್ರಿವರೆಗೂ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಸುರೇಶ್‍ಗೌಡ, ನಾರಾಯಣಗೌಡ, ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ಪಾಲ್ಗೊಂಡು ಮಂಡ್ಯ ಅಭ್ಯರ್ಥಿ ಬಗ್ಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಶಿವರಾಮೇಗೌಡ, ನಿವೃತ್ತ ಅಧಿಕಾರಿ ಲಕ್ಷ್ಮೀ ಅಶ್ವಿನ್‍ಗೌಡ ಸೇರಿದಂತೆ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್‍ಕುಮಾರಸ್ವಾಮಿ ಅವರ ಹೆಸರನ್ನೂ ಕೂಡ ಪ್ರಸ್ತಾಪಿಸಲಾಗಿದೆ. ಆದರೆ, ದೇವೇಗೌಡರು ಅಭ್ಯರ್ಥಿಯನ್ನಾಗಿ ಯಾರನ್ನೂ ಕೂಡ ಅಂತಿಮಗೊಳಿಸಿಲ್ಲ.

ಹೀಗಾಗಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ದೇವೇಗೌಡರು ಆಯ್ಕೆ ಮಾಡುವ ಅಭ್ಯರ್ಥಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.
ಅಭ್ಯರ್ಥಿಯನ್ನು ಘೋಷಣೆ ಮಾಡಿದ ನಂತರ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ದೇವೇಗೌಡರು ಸೂಚಿಸಿದ್ದು, ಅದಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ