ಬೆಂಗಳೂರು: ಜಾಗತಿಕವಾಗಿ ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್ ಸಮಸ್ಯೆ ಎಲ್ಲರನ್ನೂ ಕಾಡಲಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ. ಅಂತರ್ಜಾಲದ ಸರ್ವರ್, ಡೊಮೇನ್ ಮತ್ತು ನೆಟ್ವರ್ಕ್ ಕನೆಕ್ಷನ್ ನಿರ್ವಹಣೆ ಕಾರ್ಯ ನಡೆಯಲಿದ್ದು, ಬಹುತೇಕ ನೆಟ್ವರ್ಕ್ ಸರಬರಾಜು ಸಂಸ್ಥೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಅಂತಾಷ್ಟ್ರೀಯ ಅಸೈನ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ ಕಾರ್ಪೊರೇಷನ್ (ಐಸಿಎಎನ್ಎನ್) ನಿರ್ವಹಣಾ ಕಾರ್ಯವನ್ನು ಮಾಡುತ್ತಿದ್ದು ಡೊಮೇನ್ ನೇಮ್ ಸಿಸ್ಟಮ್ (ಡಿಎನ್ಎಸ್) ಮತ್ತಷ್ಟು ಸುರಕ್ಷಿತವಾಗಲಿದೆ ಎನ್ನಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಕ್ಕೆ ಐಸಿಎಎನ್ಎನ್ ಕೈ ಹಾಕಿದ್ದು, ಎರಡು ದಿನಗಳ ಕಾಲ ಅಂತರ್ಜಾಲ ಬಳಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಮ್ಯುನಿಕೇಷನ್ ರೆಗ್ಯುಲೇಟರಿ ಅಥಾರಿಟಿ ಹೇಳಿದೆ.
ಇದರ ಜತೆಗೆ ಆನ್ಲೈನ್ ವ್ಯವಹಾರಗಳಿಗೂ ಸಮಸ್ಯೆಯಾಗಲಿದೆ. ಡಿಜಿಟಲ್ ವಾಲೆಟ್ ಮುಖಾಂತರ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಸಾದ್ಯವಾಗದೇ ಇರಬಹುದು ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟುಗಳಿದ್ದರೆ, ಆದಷ್ಟು ಶೀಘ್ರದಲ್ಲಿ ಮಾಡುವುದು ಒಳ್ಳೆಯದು ಎಂದು ತಿಳಿಸಲಾಗಿದೆ.
ಜಗತ್ತಿನಾದ್ಯಂತ ಹ್ಯಾಕರ್ಗಳ ಕಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಮೊಬೈಲ್ ಮತ್ತಿತರೆ ಗ್ಯಾಜೆಟ್ ಬಳಕೆದಾರರ ಖಾಸಗೀಯತೆಗೆ ಧಕ್ಕೆಯುಂಟಾಗುತ್ತಿದೆ. ಎರಡು ದಿನಗಳ ಕಾಲ ತಾತ್ಕಾಲಿಕ ಅಂತರ್ಜಾಲ ಸಮಸ್ಯೆ ಎದುರಿಸಬೇಕಾದ ಸಂದರ್ಭ ಬಂದಿರುವುದು ನಿಜವಾದರೂ, ಮುಂದಿನ ದಿನಗಳಲ್ಲಿ ಹ್ಯಾಕರ್ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು.