ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ ಕರೆದ ಗೋವಾ ಸಿಎಂ ಮನೋಹರ್ ಪರಿಕ್ಕರ್

ನವದೆಹಲಿದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಪ್ಯಾನ್​ಕ್ರಿಯಾಟಿಕ್​ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಅವರು ಸೆಪ್ಟೆಂಬರ್ 15ರಂದು ದೆಹಲಿ ಏಮ್ಸ್​ಗೆ ದಾಖಲಾಗಿದ್ದಾರೆ.
ಗೋವಾ ರಾಜ್ಯ ಸರ್ಕಾರದ ಮೈತ್ರಿ ಪಕ್ಷಗಳಾದ ಮಹಾರಾಷ್ಟ್ರವಾಡಿ ಗೋಮಾಂತಕ್ ಪಕ್ಷ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಕ್ಷ (ಜಿಎಫ್​ಪಿ)ಗಳೊಂದಿಗೆ ಮೈತ್ರಿ ವಿಚಾರವಾಗಿ ಚರ್ಚೆ ಮಾಡಲು ಮತ್ತು ಯಾವ ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಾತುಕತೆ ನಡೆಯಲಿದೆ.
ಎಂಜಿಪಿ ನಾಯಕ ಮತ್ತು ಲೋಕೋಪಯೋಗಿ ಸಚಿವ ಸುದೀನ್ ಧವಾಲಿಕರ್, ಜಿಎಫ್​ಪಿ ನಾಯಕ ಮತ್ತು ನಗರ ಯೋಜನೆ ಸಚಿವ ವಿಜಯ್ ಸರ್ದೇಸಾಯಿ, ಕಂದಾಯ ಸಚಿವ ರೋಹನ್ ಖಾಂಟೆ, ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗವಾಡೆ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಗೋವಾ ಬಿಜೆಪಿ ಸರ್ಕಾರವನ್ನು ಬೆಂಬಲಿಸಿರುವ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಅವರು ಕೂಡ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಸಭೆಗೆ ಆಹ್ವಾನ ನೀಡಲಾಗಿದೆ. ಆದರೆ, ನನ್ನನ್ನು ಯಾರು ಕರೆದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಗಾಂವ್ಕರ್​ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಅಲ್ಲದೇ, ಸಭೆಯ ಅಜೆಂಡಾ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿದೆ ಸುದ್ದಿಸಂಸ್ಥೆ ಹೇಳಿದೆ.
ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಅನಾರೋಗ್ಯದಿಂದ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಕಾಂಗ್ರೆಸ್​ನ 16 ಶಾಸಕರು ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಇಲ್ಲದೇ, ಸರ್ಕಾರ ಅಸ್ಥಿರಗೊಂಡಿದೆ. ಹೀಗಾಗಿ ಬಿಜೆಪಿ ಮೈತ್ರಿ ಸರ್ಕಾರವನ್ನು ರದ್ದುಗೊಳಿಸಿ, ಹೊಸ ಸರ್ಕಾರ ರಚಿಸಲು ಬಹುಮತ ಸಾಬೀತು ಮಾಡಲು ಕಾಂಗ್ರೆಸ್​ಗೆ ಅವಕಾಶ ನೀಡಬೇಕು ಎಂದು ಮನವಿ ಸೆ.19ರಂದು ಮನವಿ ಮಾಡಿದ್ದರು. ಆಗ ಮಧ್ಯಪ್ರವೇಶ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೋವಾ ಸಚಿವರನ್ನು ಭೇಟಿಯಾಗಿ, ಉಪಾಯದಿಂದ ಕೆಲಸ ಮಾಡುವಂತೆ ಸೂಚನೆ ನೀಡಿ ಬಂದು, ಕಾಂಗ್ರೆಸ್​ ಯತ್ನಕ್ಕೆ ತಡೆ ಹಾಕಿದ್ದರು. ಅಲ್ಲದೇ, ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಶೀಘ್ರದಲ್ಲಿಯೇ ಸಚಿವ ಸಂಪುಟ ಪರಿಷ್ಕರಣೆ ಆಗಲಿದೆ ಎಂದು ಹೇಳಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ