ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು ಸರ್ಕಾರ ಚಿಂತನೆ…?

ಬೆಂಗಳೂರು,ಅ.9- ಈಗಾಗಲೇ ರೈತರ ಬೆಳೆ ಸಾಲ ಮನ್ನಾ ಘೋಷಿಸಿರುವ ರಾಜ್ಯ ಸರ್ಕಾರ ಇದೀಗ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ರೈತರ ಸಾಲ ಮನ್ನಾ ಘೋಷಿಸಿ, ಅದರ ಅನುಷ್ಠಾನಕ್ಕಾಗಿ ಕಸರತ್ತು ನಡೆಸುತ್ತಿರುವ ದೋಸ್ತಿ ಸರ್ಕಾರ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಸಾಲ ಮನ್ನಾಕ್ಕೆ ತಯಾರಿ ನಡೆಸುತ್ತಿದ್ದು, ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ತಂತ್ರ ಅನುಸರಿಸಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಲ್ಯಾಪ್‍ಟಾಪ್ ವಿತರಣೆ ಯೋಜನೆ ಅನುಷ್ಠಾನಗೊಳಿಸಲು ವಿಫಲಗೊಂಡಿರುವ ಮೈತ್ರಿ ಸರ್ಕಾರ, ಹಿಂದಿನ ಸರ್ಕಾರದ ಹಲವು ಭಾಗ್ಯಗಳಿಗೆ ಕತ್ತರಿ ಹಾಕಿದ್ದಲ್ಲದೆ ಇದೀಗ ಸಾಲ ಮನ್ನಾ ಭಾಗ್ಯದ ಮೊರೆ ಹೋಗಿದೆ.

ಏನಿದು ಶಿಕ್ಷಣ ಸಾಲ ಮನ್ನಾ:
ರೈತರ ಸಾಲ ಮನ್ನಾ ಮಾಡಿದ ಸರ್ಕಾರ ಈಗ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಸಾಲ ಮನ್ನಾಕ್ಕೂ ಮುಂದಾಗಿದ್ದು, ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷರ ಪ್ರಸ್ತಾವನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಗಳ ಬಗ್ಗೆ ವರದಿ ಸಲ್ಲಿಸುವಂತೆ ಆಯುಕ್ತರನ್ನು ಕೋರಲಾಗಿದೆ.
ಕಳೆದ ವರ್ಷ ಜುಲೈನಲ್ಲಿಯೇ ಈ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲೆಗಳ ಜಂಟಿ ನಿರ್ದೇಶಕರು, ಉಪ ನಿರ್ದೇಶಕರುಗಳಿಗೆ ಸುತ್ತೋಲೆ ಹೊರಡಿಸಿ ಮಾಹಿತಿ ನೀಡುವಂತೆ ಸೂಚಿಸಿದ್ದರು.

ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳಿಂದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಪಡೆದಿರುವ ಶಿಕ್ಷಣ ಸಾಲದ ವಿವರವನ್ನು ಕೋರಲಾಗಿದೆ. ಶಿಕ್ಷಣ ಸಾಲ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಿವರ, ಸಂಖ್ಯೆ, ಓದುತ್ತಿರುವ ಕೋರ್ಸ್, ಬ್ಯಾಂಕ್ ವಿವರ, ಸಾಲದ ಮೊತ್ತದ ಬಡ್ಡಿ ಮೊತ್ತ, ಮಾಹಿತಿಯನ್ನು ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು.

ಎಲ್ಲಾ ಜಿಲ್ಲೆಯ ಇಲಾಖೆಯ ಜಂಟಿ ಹಾಗೂ ಉಪನಿರ್ದೇಶಕರು ಈ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಕಾರಣ, ಇಲಾಖೆ ಆಯುಕ್ತರು ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಮತ್ತೊಂದು ಸಾಲ ಮನ್ನಾ ಸಾಧ್ಯನಾ:
ಈಗಾಗಲೇ ರೈತರ ಸಾಲ ಮನ್ನಾಗಾಗಿ ದೋಸ್ತಿ ಸರ್ಕಾರ ಸಂಪನ್ಮೂಲದ ಕ್ರೋಢೀಕರಣದ ಕಸರತ್ತಿನಲ್ಲಿದೆ. ಇದಕ್ಕಾಗಿ ಈ ಹಿಂದಿನ ಸರ್ಕಾರದ ಭಾಗ್ಯಗಳಿಗೆ ಕತ್ತರಿ ಹಾಕಿತ್ತು. ಇದೀಗ ಶಿಕ್ಷಣ ಸಾಲ ಮನ್ನಾದ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಏಕೆಂದರೆ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರ, ಶಿಕ್ಷಣ ಸಾಲ ಮನ್ನಾಗೆ ಎಲ್ಲಿಂದ ಸಂಪನ್ಮೂಲ ಹೊಂದಿಸುತ್ತೆ ಎಂಬುದು ಹಲವರ ಪ್ರಶ್ನೆ. ಇಲಾಖೆಯಲ್ಲಿ ಅನುದಾನ ಖರ್ಚಾಗದೆ ಬಾಕಿ ಉಳಿದುಕೊಂಡಿದ್ದು, ಅದನ್ನು ಬಳಸಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ