ಹೊಸ ಮರಳು ನೀತಿ ತರಲು ಮುಂದಾದ ಸಿಎಂ

ಬೆಂಗಳೂರು,ಅ.9- ಕೈಗೆಟಕುವ ದರದಲ್ಲಿ ಮರಳು ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊಸ ಮರಳು ನೀತಿ ತರಲು ಮುಂದಾಗಿದ್ದಾರೆ.
ಅಕ್ರಮ ಮರಳುಗಾರಿಕೆ, ಫಿಲ್ಟರ್ ಮರಳು, ಮರಳು ಕೊರತೆ ಜತೆಗೆ ದುಬಾರಿ ಮರಳು… ಇದು ರಾಜ್ಯದ ವಾಸ್ತವ ಸ್ಥಿತಿ. ಈ ಮರಳು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇಲ್ಲಿವರೆಗಿನ ಸರ್ಕಾರಗಳು ವಿಫಲವಾಗಿವೆ.

ಒಂದೆಡೆ ಇಚ್ಛಾ ಶಕ್ತಿಯ ಕೊರತೆ, ಇನ್ನೊಂದೆಡೆ ಮರಳು ಮಾಫಿಯಾದ ಲಾಬಿ. ಹೀಗಾಗಿ ಜನ ಸ್ನೇಹಿ ಮರಳು ನೀತಿ ಈಗಲೂ ಮರೀಚಿಕೆಯಾಗಿಯೇ ಉಳಿದುಕೊಂಡಿದೆ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಮರಳು ನೀತಿ ತರುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಾರ ಸದ್ಯ ರಾಜ್ಯದಲ್ಲಿ ಸುಮಾರು 30 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಮರಳಿನ ಬೇಡಿಕೆ ಇದೆ. ಈ ಮರಳು ಬೇಡಿಕೆಯಲ್ಲಿ ಪ್ರಸ್ತುತ 3.5 ಎಂಎಂಟಿ ನದಿ ಮರಳು ಪೂರೈಕೆಯಾಗುತ್ತಿದೆ. ಇನ್ನು ಸುಮಾರು 22 ಎಂಎಂಟಿಯಷ್ಟು ಎಂ-ಸ್ಯಾಂಡ್ ಪೂರೈಕೆಯಾಗುತ್ತಿದೆ. ಅಂದರೆ ಸುಮಾರು 4.5 ಎಂಎಂಟಿ ಮರಳಿನ ಕೊರತೆ ಇದೆ.

2017-18ನೇ ಸಾಲಿನಲ್ಲಿ 311ಮರಳು ಬ್ಲಾಕ್‍ಗಳನ್ನು ಹರಾಜು ಮಾಡಲಾಗಿದೆ. ಈ ಪೈಕಿ 161 ಗುತ್ತಿಗೆ ಮಂಜೂರು ಮಾಡಲಾಗಿದೆ. ಇದರಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮರಳು ಬ್ಲಾಕ್‍ಗಳು ಕೇವಲ 95. ಇನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಟ್ಟಿರುವ ಮರಳು ಬ್ಲಾಕ್ 39. ಇದರಲ್ಲಿ 12 ಬ್ಲಾಕ್‍ಗಳು ಕಾರ್ಯ ನಿರ್ವಹಿಸುತ್ತಿದೆ.

ರಾಜ್ಯದಲ್ಲಿ ಸುಮಾರು 164 ಎಂ-ಸ್ಯಾಂಡ್ ಘಟಕಗಳು ಇವೆ. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ 15 ಕಡೆ ಪರವಾನಗಿ ನೀಡಲಾಗಿದೆ. ಇನ್ನು ಮರಳು ಆಮದು ಮಾಡಿಕೊಳ್ಳಲು ಒಟ್ಟು ಆರು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ಇಲ್ಲಿವರೆಗೆ 5 ಸಾವಿರ ಮೆಟ್ರಿಕ್ ಟನ್ ಮರಳು ಆಮದಾಗಿದೆ.

ಹೊಸ ಮರಳು ನೀತಿಗೆ ಚಿಂತನೆ:
ಹೊಸ ಮರಳು ನೀತಿ ರೂಪಿಸಲು ಮುಂದಾಗಿರುವ ಕುಮಾರಸ್ವಾಮಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲು ನಿರ್ಧರಿಸಿದ್ದು, ಮರಳುಗಾರಿಕೆ ಬಗ್ಗೆ ಅಧ್ಯಯನ ನಡೆಸಲು ತಜ್ಞರ ತಂಡ ಈಗಾಗಲೇ ಆಂಧ್ರ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ತೆರಳಿದ್ದು, ಆ ವರದಿ ಆಧಾರದ ಮೇಲೆ ಮರಳು ನೀತಿಗೆ ಬದಲಾವಣೆ ತರಲು ಮುಂದಾಗಿದ್ದಾರೆ. ತಿಂಗಳಾಂತ್ಯಕ್ಕೆ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸುವ ಸಾಧ್ಯತೆ ಇದೆ.

ಸದ್ಯದ ಮರಳು ಕೊರತೆ ನೀಗಿಸಲು ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಎಂ-ಸ್ಯಾಂಡ್ ಉತ್ಪಾದಿಸಿ, ಪೂರೈಕೆ ಮಾಡಲು ನಿರ್ಧರಿಸಿದೆ. ಇನ್ನು ಕರಾವಳಿ ನಿಯಂತ್ರಣ ವಲಯದಲ್ಲಿ ಸುಮಾರು 61 ಮರಳು ದಿಬ್ಬಗಳನ್ನು ತೆರವುಗೊಳಿಸಲು ಸುಮಾರು 390 ವ್ಯಕ್ತಿಗಳಿಗೆ ಸಾಂಪ್ರದಾಯಿಕ ಮರಳು ತೆಗೆಯುವ ಅನುಮತಿ ನೀಡಲಾಗಿದೆ. ಜತೆಗೆ ಹೆಚ್ಚಾಗಿ ಆಮದು ಮರಳಿನ ಹೆಚ್ಚಿನ ಬಳಕೆಗಾಗಿ ನಿಯಮದಲ್ಲೂ ತಿದ್ದುಪಡಿ ತರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ