ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು,ಅ.9- ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಬಿಜೆಪಿಯ ಕೋರ್ ಕಮಿಟಿ ಸಭೆ ಇಂದು ನಡೆಯಲಿದೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರಾದ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ನಳಿನ್‍ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಮಂಡ್ಯ, ಶಿವಮೊಗ್ಗ, ಬಳ್ಳಾರಿಯ ಲೋಕಸಭೆ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಸಭೆ ಕರೆಯಲಾಗಿದೆ.

ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನೇ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಇನ್ನು ಬಳ್ಳಾರಿ, ಮಂಡ್ಯ, ರಾಮನಗರ, ಜಮಖಂಡಿ ಕ್ಷೇತ್ರಗಳಿಗೆ ಇಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಕ್ಷದ ಚುನಾವಣಾ ಸಮಿತಿಗೆ ಕಳುಹಿಸಿಕೊಡುವ ಸಂಭವವಿದೆ.

ಬಳ್ಳಾರಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದು, ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ಪಕ್ಷಕ್ಕೆ ಸವಾಲಾಗಿದೆ. ಶಾಸಕ ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ, ಜೆ.ಶಾಂತ, ಸೋದರಳಿಯ ಸುರೇಶ್ ಬಾಬು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪನವರ ಪುತ್ರ ಸುಜಯ್ ಕುಮಾರ್, ಮಾಜಿ ಸಂಸದ ಸಣ್ಣ ಫಕೀರಪ್ಪ ಹೆಸರುಗಳು ಚಾಲ್ತಿಯಲ್ಲಿವೆ.

ಅಂತಿಮವಾಗಿ ಬಳ್ಳಾರಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಶ್ರೀರಾಮುಲು ಹೆಗಲಿಗೆ ಯಡಿಯೂರಪ್ಪ ನೀಡಿದ್ದಾರೆ. ಅವರು ಸೂಚಿಸುವ ಅಭ್ಯರ್ಥಿಯೇ ಅಂತಿಮವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಷ್ಟೇನೂ ಪಕ್ಷ ಪ್ರಬಲವಾಗಿರದ ಮಂಡ್ಯದಲ್ಲಿ ಈವರೆಗೂ ಯಾವುದೇ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ. ಒಕ್ಕಲಿಗರ ಸಂಘದ ನಿರ್ದೇಶಕ ಶಿವಲಿಂಗಯ್ಯ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೆಸರುಗಳು ಪರಿಶೀಲನೆಯಲ್ಲಿದೆ.

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಖಂಡ ಎಂ.ರುದ್ರೇಶ್, ವೇಣುಗೋಪಾಲ್, ವಿಧಾನಪರಿಷತ್ ಸದಸ್ಯ ಎಂ.ಲಿಂಗಪ್ಪನವರ ಪುತ್ರ ಚಂದ್ರಶೇಖರ್, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ.
ಜಮಖಂಡಿಯಲ್ಲಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಶಾಸಕ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ನಡುವೆ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.
ಅಂತಿಮವಾಗಿ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಭವವಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಹೆಜ್ಜೆ ಇಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ