ಉಪಸಮರದ ಮತದಾನಕ್ಕೆ ದಿನಗಣನೆ: ಮೂರು ಪಕ್ಷಗಳಲ್ಲೂ ಹೆಚ್ಚಿದ ಅಭ್ಯರ್ಥಿಗಳ ಆಯ್ಕೆ ಕಸರತ್ತು

ಬೆಂಗಳೂರು,ಅ.9-ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಸಮರದ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಪ್ರಮುಖ ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ಈ ಉಪ ಕದನದಲ್ಲಿ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸಲು ಮೂರು ಪಕ್ಷಗಳು ನಿರ್ಧರಿಸಿರುವುದರಿಂದ ಅಭ್ಯರ್ಥಿ ಗೊಂದಲ ಇಂದು ಕೂಡ ಮುಂದುವರೆದಿದೆ.

ವಿಧಾನಸಭೆ ಚುನಾವಣೆ ನಂತರ ಆಕಸ್ಮಿಕವಾಗಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡು ಸರ್ಕಾರ ರಚಿಸಿದ್ದರೂ ಈ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಬಿಜೆಪಿ ವಿರುದ್ದ ಹೋರಾಡಲು ಒಂದಾಗಬೇಕೆಂಬ ಮಾತು ಕೇಳಿ ಬರುತ್ತಿದೆಯಾದರೂ ಸ್ಥಳೀಯ ಜಿಲ್ಲಾ ನಾಯಕರು ಒಪ್ಪದಿರುವುದು ಎರಡೂ ಪಕ್ಷಗಳಿಗೆ ಕಗ್ಗಂಟಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಸ್ಥಳೀಯ ಕಾಂಗ್ರೆಸ್ ನಾಯಕರು ಸುತಾರಾಂ ಒಪ್ಪುತ್ತಿಲ್ಲ. ಇನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ಕ್ಷೇತ್ರಗಳನ್ನು ತೆನೆ ಹೊತ್ತ ಮಹಿಳೆಗೆ ಬಿಟ್ಟುಕೊಟ್ಟು ಶಿವಮೊಗ್ಗ, ಬಳ್ಳಾರಿ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿದ್ದರೂ ಪರಸ್ಪರ ವಿರುದ್ಧವಾಗಿರುವ ಎರಡು ಪಕ್ಷಗಳು ಹೇಗೆ ಮೈತ್ರಿ ಮಾಡಿಕೊಳ್ಳುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಲಿಂಗಪ್ಪ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಎರಡು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ. ಇದು ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಿಮಿಸಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಎದುರಾಗಿದೆ.
ಭುಗಿಲೆದ್ದ ಭಿನ್ನಮತ :
ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ಜೆಡಿಎಸ್ ಟಿಕೆಟ್‍ಗಾಗಿ ಆಕಾಂಕ್ಷಿಗಳ ನಡುವೆ ಪೈಪೆÇೀಟಿ ಹೆಚ್ಚಾಗಿದ್ದು, ಜಿಲ್ಲಾ ಜೆಡಿಎಸ್ ನಾಯಕರ ನಡುವೆ ಭಿನ್ನಮತ ಭುಗಿಲೆದ್ದಿದೆ.

ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್‍ಗೌಡ, ಮತ್ತು ಡಿ.ಸಿ. ತಮ್ಮಣ್ಣ ಪುತ್ರ ಸಂತೋಷ್ ಅವರ ನಡುವೆ ಟಿಕೆಟ್‍ಗಾಗಿ ಪೈಪೆÇೀಟಿ ಏರ್ಪಟ್ಟಿದೆ. ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಮೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಮನವಿ ಮಾಡುತ್ತಿದ್ದಾರೆ.
ಶಿವರಾಮೇಗೌಡರು ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಿ, ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಟಿಕೆಟ್ ನೀಡಬೇಡಿ ಎಂದು ಮನವಿ ಮಾಡಿದ್ದಾರೆ. ಕಾರ್ಯಕರ್ತರ ಒತ್ತಡದಿಂದಾಗಿ ಜೆಡಿಎಸ್ ವರಿಷ್ಠರು ಕಂಗಾಲಾಗಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಗೊಂದಲ ಇನ್ನಷ್ಟು ಹೆಚ್ಚಿದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದರು. ಬೇಲೂರು, ಹುಣಸೂರು, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಪ್ರಜ್ವಲ್ ಹೆಸರು ಪ್ರಸ್ತಾಪವಾಗಿತ್ತು.
ಆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಕುಟುಂಬದಿಂದ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ನೀಡಿದ್ದರು. ಈಗ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗೆ ಮತ್ತೆ ಪ್ರಜ್ವಲ್ ರೇವಣ್ಣ ಹೆಸರು ಪ್ರಬಲವಾಗಿ ಪ್ರಸ್ತಾಪವಾಗುತ್ತಿದೆ.

ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಂಡ್ಯ ಲೋಕಸಭೆ ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವುದೇ ನಿರ್ಧಾರವನ್ನು ವರಿಷ್ಠರು ಕೈಗೊಂಡಿಲ್ಲ.
ಸ್ಪರ್ಧಾಕಾಂಕ್ಷಿಗಳು ಈಗಾಗಲೇ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಕೋರುವ ಪ್ರಯತ್ನ ನಡೆಸುತ್ತಿದ್ದಾರೆ. ಯಾರಿಗೂ ಕೂಡ ಇನ್ನೂ ಟಿಕೆಟ್ ನೀಡುವ ಖಾತ್ರಿಯನ್ನು ವರಿಷ್ಠರು ನೀಡಿಲ್ಲ.

ಬಿಜೆಪಿಯಲ್ಲೂ ಗೊಂದಲ:
ಮಂಡ್ಯ ಲೋಕಸಭಾ ಉಪ ಚುನಾವಣಾ ಸಮರಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಪ್ರಬಲ ಒಕ್ಕಲಿಗ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ಆರಂಭಿಸಿದೆ. ಇನ್ನು ಚೆಲುವರಾಯಸ್ವಾಮಿ ಬಿಜೆಪಿ ಸೇರ್ಪಡೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಮಾಜಿ ಡಿಸಿಎಂ ಆರ್.ಅಶೋಕ್ ಅಥವಾ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಸಾರ್ವತ್ರಿಕ ಚುನಾವಣೆಗೆ ಈ ಇಬ್ಬರು ನಾಯಕರು ಆಸಕ್ತಿ ಹೊಂದಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಸ್ಥಳೀಯ ಚಂದಗಾಲು ಶಿವಣ್ಣ ಅಥವಾ ನಂಜುಂಡೇಗೌಡಗೆ ಟಿಕೆಟ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಒಲವು ಇಲ್ಲದಿದ್ದರೂ ಮಂಡ್ಯ ಬೈ ಎಲೆಕ್ಷನ್ ಬಿಜೆಪಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಕಗ್ಗಂಟಾದ ಗಣಿನಾಡಿನ ಅಭ್ಯರ್ಥಿ ಆಯ್ಕೆ:
ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಅಲ್ಪಾವಧಿ ಅವಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತ ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎನ್ನುವ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ. ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಬಿ. ಶ್ರೀರಾಮುಲು ರಾಜೀನಾಮೆ ನೀಡಿರುವ ಲೋಕಸಭಾ ಸ್ಥಾನಕ್ಕೆ ಬಿ.ಶ್ರೀರಾಮುಲು ಸೋದರಳಿಯ, ಕಂಪ್ಲಿಯ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರನ್ನು ಓಲೈಸಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸೇರಿ, ಜಿಲ್ಲೆಯ ಮಾಜಿ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ, ಸಂತೋಷ್ ಎಸ್. ಲಾಡ್, ಹಿರಿಯ ರಾಜಕಾರಣಿಗಾಳದ ಎನ್. ಸೂರ್ಯನಾರಾಯಣರೆಡ್ಡಿ, ಕೆ.ಸಿ.ಕೊಂಡಯ್ಯ, ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್, ಶಾಸಕರಾದ ಇ. ತುಕಾರಾಂ, ಬಿ. ನಾಗೇಂದ್ರ ಸೇರಿದಂತೆ ಅನೇಕ ರಾಜಕಾರಣಿಗಳ ಜೊತೆ ಉತ್ತಮ ಸ್ನೇಹಸಂಬಂಧ ಹೊಂದಿದ್ದು, ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈಹಾಕಲು ಹೊರಟಿದ್ದ ಆಡಳಿತಾರೂಢ ಜೆಡಿಎಸ್, ಕಾಂಗ್ರೆಸ್‍ಗೆ ದಿಢೀರ್ ಎದುರಾಗಿರುವ ಪಂಚ ಕ್ಷೇತ್ರಗಳ ಫೈಟ್ ತುಸು ತಲೆಬೇನೆ ಹೆಚ್ಚಿಸಿದರೆ, ಸಂಪುಟ ವಿಸ್ತರಣೆ ಬಂಡಾಯದ ಲಾಭ ಪಡೆಯಲು ಕಾದು ಕುಳಿತಿದ್ದ ಬಿಜೆಪಿ ಪಾಲಿಗೆ ಅನಿರೀಕ್ಷಿತ ಹಾಗೂ ಅನಿವಾರ್ಯ ರಾಜಕೀಯ ಬೆಳವಣಿಗೆ, ಮೂರು ಸ್ಥಾನಗಳ ಲೋಕಸಭೆ ಉಪಸಮರ ಹೊಸ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ