ಬೆಂಗಳೂರು, ಅ.6- ಎಸಿಬಿ ದಾಳಿಗೊಳಗಾದ ಕೆಐಎಡಿಬಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್.ಸ್ವಾಮಿ ಅವರ ಅಕ್ರಮ ಆಸ್ತಿ ಬಗ್ಗೆ ಸಾರ್ವಜನಿಕರಿಂದ ಸುಮಾರು 500 ಫೆÇೀನ್ ಕರೆಗಳು, 60 ರಿಂದ 70 ಇಮೇಲ್ ಬಂದಿದ್ದು, ಅವರ ಅಕ್ರಮ ಆಸ್ತಿಗಳ ಬಗ್ಗೆ ಮಾಹಿತಿ ಲಭ್ಯವಾಗಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರ ಮಾಹಿತಿ ಆಧರಿಸಿ ಭ್ರಷ್ಟಾಚಾರ ನಿಗ್ರಹದಳ ಸ್ವಾಮಿ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಆನಂತರ ನಿನ್ನೆ ಸಂಜೆಯಿಂದ ನಿರಂತರವಾಗಿ ಫೆÇೀನ್ ಕರೆಗಳು, ಇಮೇಲ್ ಸಂದೇಶಗಳು ಬರುತ್ತಿವೆ. ನಿನ್ನೆ ಟಿ.ಆರ್.ಸ್ವಾಮಿ ಅವರ ಮನೆ ಮೇಲೆ ದಾಳಿ ನಡೆಸಿ ಅವರ ಕುಟುಂಬ ಮತ್ತು ಸಂಬಂಧಿಕರ ಹೆಸರಿನಲ್ಲಿರುವ 8 ಮನೆಗಳು, 11 ನಿವೇಶನಗಳು, ವಿವಿಧೆಡೆ 14 ಎಕರೆ ಕೃಷಿ ಭೂಮಿ, 1.6 ಕೆಜಿ ಚಿನ್ನ, 3 ಕಾರುಗಳು, 4 ಕೋಟಿ 52 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ.
ದಾಳಿಯ ವೇಳೆ ಆರಂಭದಲ್ಲಿ ಅವರು 45 ನಿಮಿಷ ಬಾಗಿಲು ತೆಗೆಯದೆ ಸತಾಯಿಸಿದರು. ಆದರೂ ನಾವು ಒಳ ಹೋಗಿ ತಪಾಸಣೆ ಮಾಡಿದ್ದೇವೆ. ಬಾಗಿಲು ತೆಗೆಯದ ಸಮಯದಲ್ಲಿ ಅವರು ಸಾಕ್ಷಿಗಳನ್ನು ನಾಶಪಡಿಸಿರುವ ಅವಕಾಶಗಳಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ.
ಎಸಿಬಿ ಅಧಿಕಾರಿಗಳಿಗೆ ಕೆಲಸ ಮಾಡಲು ಅಡ್ಡಿ ಪಡಿಸಿದ ಬಗ್ಗೆ ಏಕಾಏಕಿ ಕ್ರಮ ಕೈಗೊಳ್ಳುವುದಿಲ್ಲ. ಮುಂದೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ದಾಳಿ ನಡೆಸುವಾಗ ಅಧಿಕಾರಿಗಳನ್ನು ಬಂಧಿಸುವಂತಿಲ್ಲ ಕಾನೂನು ತಿದ್ದುಪಡಿಯಾಗಿದೆ ಹಾಗೂ ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳು ಸ್ಪಷ್ಟನೆ ನೀಡಿವೆ.
ದಾಳಿಗೊಳಗಾದ ಅಧಿಕಾರಿಗೆ ತಮ್ಮ ಆಸ್ತಿಯ ಮೂಲದ ಬಗ್ಗೆ ವಿವರಣೆ ನೀಡಲು ಅವಕಾಶ ನೀಡಬೇಕು, ಅದರಂತೆ ಎಸಿಬಿ ಅವಕಾಶ ನೀಡುತ್ತದೆ. ಕೃಷಿ ಆದಾಯ ಹೆಚ್ಚು ತೋರಿಸಿ ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಸರ್ಕಾರದ ಮಾರ್ಗದರ್ಶಿಯಂತೆ ಕೃಷಿ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಆದಾಯದ ಮೂಲದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಅದೂ ಕೂಡ ಐಪಿಸಿ ಸೆಕ್ಷನ್ನಡಿ ಅಪರಾಧವಾಗುತ್ತದೆ.
ವಿಚಾರಣೆ ವೇಳೆ ಅವರು ಸ್ಪಷ್ಟ ಮಾಹಿತಿ ನೀಡದೆ ಇದ್ದರೆ ಬಂಧಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಇನ್ನು ಬಿಡಿಎ ಇಂಜಿನಿಯರಿಂಗ್ ಆಫೀಸರ್-5, ಎನ್.ಜಿ.ಗೌಡಯ್ಯ ಅವರ ಮನೆಯ ಮೇಲೂ ನಿನ್ನೆ ದಾಳಿ ನಡೆಸಲಾಗಿದೆ. ಅವರ ಮನೆ , ಕಚೇರಿ ಹಾಗೂ ಇತರೆ ಭಾಗಗಳಿಂದ ವಶಪಡಿಸಿಕೊಂಡಿರುವ ದಾಖಲೆಗಳ ಪ್ರಕಾರ ಗೌಡಯ್ಯ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆಗಳು, 8 ನಿವೇಶನಗಳು, 14 ಅಪಾರ್ಟ್ಮೆಂಟ್ ಗಳಿವೆ. 18 ಕೆಜಿ 200 ಚಿನ್ನ, 10 ಕೆಜಿ ಬೆಳ್ಳಿ, 3 ಕಾರುಗಳು, 3 ದ್ವಿಚಕ್ರ ವಾಹನಗಳು, 77 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕ್ಗಳಲ್ಲಿ 15 ಲಕ್ಷ ಮತ್ತು 30 ಲಕ್ಷ ಠೇವಣೆ ಪತ್ತೆಯಾಗಿದೆ ಎಂದು ಹೇಳಿದರು.
ಗೌಡಯ್ಯ ಅವರ ಮನೆಯಲ್ಲಿ ಸುಮಾರು 4 ಸಾವಿರ ಅಮೆರಿಕನ್ ಡಾಲರ್ ಕರೆನ್ಸಿ ಪತ್ತೆಯಾಗಿದೆ.
ಈ ಇಬ್ಬರು ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುವುದು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನಡೆಸಿ ಮೂರ್ನಾಲ್ಕು ತಿಂಗಳಲ್ಲೇ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಇಂದೂ ಕೂಡ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ದಾಳಿ:
ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಇಂದೂ ಇಬ್ಬರು ಹಿರಿಯ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ಉಪವಿಭಾಗದ ಸಹಾಯಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಚಂದ್ರೇಗೌಡ ಬಿ.ಪಾಟೀಲ್ ಮತ್ತು ಬಾಗಲಕೋಟೆ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಿದಾನಂದ ಬಿ. ಮಂಚಿನಾಳ್ ಅವರ ಮನೆ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಯಾವುದೇ ಸಂಸ್ಥೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಈವರೆಗಿನ ಎಲ್ಲಾ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಉತ್ತಮವಾಗಿದೆ. ಇನ್ನು ಮುಂದೆಯೂ ಸಾರ್ವಜನಿಕರು ಸಹಕಾರ ನೀಡಬೇಕು. ಸಹಾಯವಾಣಿ 1064ಗೆ ಅಥವಾ ದೂ.ಸಂ.080-22342100 ಸಂಪರ್ಕಿಸಬಹುದು ಮತ್ತು ಫೇಸ್ಬುಕ್, ಟ್ವಿಟರ್ನಲ್ಲೂ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಪೇಜ್ಗಳಿವೆ. ಅಲ್ಲಿಗೂ ಮಾಹಿತಿ ನೀಡಬಹುದು ಎಂದು ಅವರು ಮನವಿ ಮಾಡಿದರು.
ಭ್ರಷ್ಟಾಚಾರ ನಿಗ್ರಹ ದಳ ಮೂರು ವಿಧದ ಪ್ರಕರಣಗಳನ್ನು ದಾಖಲಿಸುತ್ತದೆ. ಅದರಲ್ಲಿ ಲಂಚ ಪಡೆಯುವಾಗ ದಾಳಿ ಮಾಡುವುದು, ಅಕ್ರಮ ಆಸ್ತಿ ತಪಾಸಣೆ ಮತ್ತು ಲಂಚಕ್ಕಾಗಿ ಬೇಡಿಕೆ ಇಟ್ಟು ಸಾರ್ವಜನಿಕರಿಗೆ ತೊಂದರೆ ಕೊಡುವುದು. ಈ ಮೂರೂ ಪ್ರಕರಣಗಳ ಪೈಕಿ ದಾಳಿ ಮತ್ತು ಅಕ್ರಮ ಆಸ್ತಿ ಪ್ರಕರಣದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಎಫ್ಐಆರ್ ದಾಖಲಿಸಬಹುದು. ಅಕ್ರಮ ಆಸ್ತಿ ಕುರಿತು ಸಾರ್ವಜನಿಕರು ನೀಡುವ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದರು.