ರಾಣಿ ಚನ್ನಮ್ಮ ವಿವಿಗೆ ನುಗ್ಗಿ ದಾಂಧಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ

ಬೆಂಗಳೂರು,ಅ.6- ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.

ರಾಣಿ ಚನ್ನಮ್ಮ ವಿವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರೊಬ್ಬರ ಬೆಂಬಲಿಗರು ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಕುಲಪತಿ ಶಿವಾನಂದ ಹೊಸಮನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ನಡೆದು ಐದಾರು ದಿನವಾದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ಜವಹಾರ್‍ಲಾಲ್ ವಿಶ್ವವಿದ್ಯಾಲಯ ರೀತಿ ರಾಣಿ ಚನ್ನಮ್ಮ ವಿವಿಯಲ್ಲೂ ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ.

ಸಿದ್ದು ಸುಣಗಾರ್ ಎಂಬುವರಿಂದ ದಾಂಧಲೆ ನಡೆದಿರುವುದು ಸಾಬೀತಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಈ ಬಗ್ಗೆ ಈವರೆಗೂ ಒಂದೇ ಒಂದು ಮಾತನಾಡಿಲ್ಲ. ಪರಮೇಶ್ವರ್ ಕೂಡ ಮೌನ ಶರಣಾಗಿದ್ದಾರೆ. ವಿವಿಯಲ್ಲಿ ದಾಂಧಲೆ ನಡೆಸಿದವರು ಯಾವುದೇ ಪಕ್ಷಕ್ಕೆ ಸೇರಿರಲಿ ತಕ್ಷಣವೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ನಾವು ಕೂಡ ಬೀದಿಗಿಳಿಯಬೇಕೆಂದು ಎಚ್ಚರಿಸಿದರು.

ರೈತರಿಗೆ ಕಿರುಕುಳ:
ಇನ್ನು ರಾಜ್ಯ ಸರ್ಕಾರ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆಯಾದರೂ ಈವರೆಗೂ ಇದು ಅನುಷ್ಠಾನವಾಗಿಲ್ಲ. ರೈತರಿಗೆ ತಕ್ಷಣವೇ ಋಣಮುಕ್ತ ಪತ್ರ ವಿತರಣೆ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಇದುವರೆಗೂ ಯಾವ ರೈತರಿಗೂ ಇದು ತಲುಪಿಲ್ಲ ಎಂದು ದೂರಿದರು.

ಸಾಲಮನ್ನಾಕ್ಕಾಗಿ ಸರ್ಕಾರ 12 ಷರತ್ತುಗಳನ್ನು ಹಾಕಿ ರೈತರಿಗೆ ಕಿರುಕುಳ ನೀಡುತ್ತಿದೆ. ಸಾಲಮನ್ನಾವಾಗಬೇಕಾದರೆ ದಾಖಲೆಗಳನ್ನು ಕೊಡಿ ಎಂದು ಅಧಿಕಾರಿಗಳು ಪ್ರತಿನಿತ್ಯ ಹಿಂಸೆ ನೀಡುತ್ತಿದ್ದಾರೆ. ಒಂದು ಕಡೆ ಋಣಮುಕ್ತ ಪತ್ರ ಸಿಗದಿರುವುದು ಹಾಗೂ ಹೊಸದಾಗಿ ಬ್ಯಾಂಕ್‍ಗಳು ರೈತರಿಗೆ ಸಾಲ ನೀಡದಿರುವುದರಿಂದ ಅನ್ನದಾತ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಲಮನ್ನಾಕ್ಕಾಗಿ ಸರ್ಕಾರ ಷರತ್ತುಗಳನ್ನು ಈಗಲಾದರೂ ನಿಲ್ಲಿಸಬೇಕು. ಷರತ್ತು ಹಾಕುತ್ತಿರುವುದು ಒಂದು ನಾಟಕ. ಚುನಾವಣೆಗಾಗಿ ಜೆಡಿಎಸ್ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಈಗ ಷರತ್ತುಗಳ ನಾಟಕವಾಡತ್ತಿದೆ ಎಂದು ಆರೋಪಿಸಿದರು.

ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿರುವ ಒಂದು ಗುಂಡಿಗಳನ್ನು ಮುಚ್ಚಲು ಮೂರು ಲಕ್ಷ ರೂ. ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ. ಜನರ ತೆರಿಗೆ ಹಣವನ್ನು ಹೇಗೆ ಕೊಳ್ಳೆ ಹೊಡೆಯಬಹುದು ಎಂಬುದಕ್ಕೆ ಇದೇ ನಿದರ್ಶನ. ಹೈಕೋರ್ಟ್ ಛೀಮಾರಿ ಹಾಕಿದ್ದರೂ ಬಿಬಿಎಂಪಿ ಇನ್ನು ನಿದ್ದೆಯಿಂದ ಎದ್ದಿಲ್ಲ ಎಂದು ವ್ಯಂಗ್ಯವಾಡಿದರು.

ಸರ್ಕಾರಕ್ಕಾಗಲಿ ಅಥವಾ ಬಿಬಿಎಂಪಿಯಲ್ಲಿ ಅಧಿಕಾರ ನಡೆಸುತ್ತಿರುವವರಿಗೆ ಸೂಕ್ಷ್ಮತೆ ಇಲ್ಲ. ಇದು ದಪ್ಪ ಚರ್ಮದ ಸರ್ಕಾರ. ಒಂದು ಗುಂಡಿ ಮುಚ್ಚಲು ಮೂರು ಲಕ್ಷ ಬೇಕು ಎಂದರೆ ಬಿಬಿಎಂಪಿಯಲ್ಲಿ ಯಾವ ರೀತಿ ಭ್ರಷ್ಟಾಚಾರನಡೆಯುತ್ತಿದೆ ಎಂದು ಊಹಿಸಿಕೊಳ್ಳಬಹುದು. ಅಧಿಕಾರಿಗಳು ಚಿನ್ನಬೆಳ್ಳಿ ಹಾಕಿ ಗುಂಡಿ ಮುಚ್ಚುತ್ತಿದ್ದೀರ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ