ಸಂಪುಟ ವಿಸ್ತರಣೆಯ ಮೇಲೆ ವಿಧಾನಸಭೆ, ಲೋಕಸಭೆ ಉಪಚುನಾವಣೆಯ ಕರಿನೆರಳು

ಬೆಂಗಳೂರು, ಅ.5- ಒಂದೆರಡು ದಿನಗಳಲ್ಲಿ ವಿಧಾನಸಭೆ, ಲೋಕಸಭೆ ಉಪಚುನಾವಣೆಯ ದಿನಾಂಕ ಘೋಷಣೆಯಾಗುವುದರಿಂದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯ ಮೇಲೆ ಕರಿನೆರಳು ಕಾಣಿಸಿಕೊಳ್ಳುತ್ತಿದೆ.

ಸಚಿವ ಸ್ಥಾನ ಸೇರಲೇಬೇಕೆಂಬ ಹಠಕ್ಕೆ ಬಿದ್ದು, ಜಿಲ್ಲೆಯಿಂದ ರಾಷ್ಟ್ರಮಟ್ಟದವರೆಗೂ ಲಾಬಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ನಿರಾಸೆಯಾಗಬಹುದೆಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮ್ಮಿಶ್ರ ಸರ್ಕಾರದ ನಾಯಕರಲ್ಲೇ ಗೊಂದಲಗಳಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಕ್ಟೋಬರ್ 12 ರಂದು ಸಂಪುಟ ವಿಸ್ತರಣೆಗೆ ದಿನಾಂಕ ಘೋಷಣೆ ಮಾಡಿದ್ದಾರೆ. ಆದರೆ ಈ ಬಗ್ಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದು, ಸಂಪುಟ ವಿಸ್ತರಣೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಾಳಯದಿಂದಲೇ ಹೆಚ್ಚು ಸ್ಥಾನಗಳು ಭರ್ತಿಯಾಗಬೇಕಿದ್ದು, ಜೆಡಿಎಸ್‍ನಲ್ಲಿ ಕೇವಲ ಒಂದು ಸ್ಥಾನ ಬಾಕಿ ಇದೆ. ಆರು ಸ್ಥಾನಗಳನ್ನು ಉಳಿಸಿಕೊಂಡಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆ ಬಗ್ಗೆ ಗಂಭೀರ ಪ್ರಯತ್ನವನ್ನೇ ಮಾಡುತ್ತಿಲ್ಲ. ಮುಖ್ಯಮಂತ್ರಿ ದಿನಾಂಕ ಘೋಷಿಸಿರುವ ಬೆನ್ನಲ್ಲೇ ಅವರು ಇಂದು ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಇತರ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.
ನಾಳೆ ಕುಮಾರಸ್ವಾಮಿಯವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ನಿರ್ಣಾಯಕ ಸ್ಥಾನದಲ್ಲಿರುವ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ದೆಹಲಿ ಪ್ರವಾಸದ ಬಗ್ಗೆ ಈವರೆಗೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೂಡ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳು ಕಡಿಮೆ ಇವೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯಾಗಲಿದೆಯೇ ಇಲ್ಲವೇ ಎಂಬ ಗೊಂದಲಗಳು ತೀವ್ರವಾಗಿದೆ.
ಕೇಂದ್ರ ಚುನಾವಣಾ ಆಯೋಗ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಮತ್ತು ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಒಂದೆರಡು ದಿನಗಳಲ್ಲಿ ದಿನಾಂಕ ಘೋಷಿಸುವ ಸೂಚನೆ ನೀಡಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದರೆ ಅದನ್ನು ನೆಪವಾಗಿಟ್ಟುಕೊಂಡು ಸಂಪುಟ ವಿಸ್ತರಣೆಯನ್ನು ಮತ್ತಷ್ಟು ಕಾಲ ಮುಂದೂಡುವ ಸಾಧ್ಯತೆಗಳಿವೆ.

ಉಪಚುನಾವಣೆ ನಡೆಯುವುದಾದರೆ ಬಹುತೇಕ ಡಿಸೆಂಬರ್ ವರೆಗೂ ಕಾಲಹರಣ ಮಾಡಲು ಸಾಧ್ಯವಿದೆ. ಡಿಸೆಂಬರ್ ನಂತರ ಇನ್ನೊಂದೆರಡು ತಿಂಗಳು ಕಾಲ ಕಳೆದರೆ ಲೋಕಸಭೆ ಚುನಾವಣೆ ಎದುರಾಗಲಿದೆ. ಅಲ್ಲಿಗೆ ಮುಂದಿನ ಮೇ ತಿಂಗಳಿನವರೆಗೂ ಸಂಪುಟ ವಿಸ್ತರಣೆಯ ತಲೆ ನೋವಿಲ್ಲ. ಅದರ ಬೆನ್ನಲ್ಲೇ ಬಂಡಾಯದ ಬಿಸಿಯ ತಲೆ ನೋವು ಇರುವುದಿಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ