ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜನರ ಮನಸ್ಥಿತಿ ಬದಲಾವಣೆ ಮುಖ್ಯ: ಸಚಿವ ಕೃಷ್ಣಭೆರೇಗೌಡ

ಬೆಂಗಳೂರು, ಅ.5-ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತಗೊಳ್ಳುವ ನಿಟ್ಟಿನಲ್ಲಿ ಜನರ ಮನಸ್ಥಿತಿ ಬದಲಾವಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೆರೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿಂದು ನಡೆದ ರಾಜ್ಯಮಟ್ಟದ ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬಯಲು ಬಹಿರ್ದೆಸೆ ಮುಕ್ತಗೊಳಿಸಲು, ಶುಚಿತ್ವ ಕಾಪಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಆ ಮೂಲಕ ಅನುದಾನ ನೀಡಿ ಶೌಚಾಲಯವನ್ನು ನಿರ್ಮಿಸಿಕೊಡುತ್ತೇವೆ.ನಂತರ ನಿರ್ಮಾಣಗೊಂಡ ಶೌಚಾಲಯಗಳ ಅಂಕಿ ಅಂಶಗಳನ್ನು ಆಧರಿಸಿ ಗುರಿ ಮುಟ್ಟಿದ್ದೇವೆ ಎಂದು ಹೇಳುತ್ತೇವೆ. ಆದರೆ ಸ್ವಚ್ಛ ಭಾರತದ ಕನಸು ನನಸಾಗಲು ಶೌಚಾಲಯಗಳ ಸದ್ಬಳಕೆ ಅಗತ್ಯವಾಗಿದೆ ಎಂದು ವಿವರಿಸಿದರು.
ನಿರ್ಮಾಣಗೊಂಡಿರುವ ಶೌಚಾಲಯಗಳನ್ನು ಗ್ರಾಮೀಣರು ಬಳಸಬೇಕು. ಆ ಮೂಲಕ ಸ್ವಚ್ಛತೆಗೆ ಆದ್ಯತೆ ಸಿಗಬೇಕು. ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಕೇವಲ ಯೋಜನೆಯಾಗಿ ಮಾತ್ರ ಉಳಿಯುತ್ತವೆ ಎಂದರು.

ಜನರು ಇಂತಹ ಯೋಜನೆಗಳನ್ನು ಸಮರ್ಪಕವಾಗಿ ಬಳಸಲು ಅವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಅಂತಹ ಮನಸ್ಥಿತಿ ತಲುಪಲು ಅವರಿಗೆ ಅಗತ್ಯ ಅರಿವು ಮೂಡಿಸಬೇಕಿದೆ. ಇತ್ತೀಚಿನ ಹಲವಾರು ಕಾರ್ಯಕ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಆದರೆ ಬಳಸದೆ ಇರುವ ಕೆಲವರಿಂದ ಯೋಜನೆ ವಿಫಲವಾಗುತ್ತಿದೆ. ಹಾಗಾಗಿ ಈ ಬಗ್ಗೆ ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ಜನಜಾಗೃತಿ ಮೂಡಿಸಬೇಕಿದೆ ಎಂದರು.
ಆಡಳಿತ ಭಾಷೆ ಬೇರೆ ಹಾಗೂ ಜನರ ಆಡು ಭಾಷೆ ಬೇರೆ. ಆಡಳಿತ ಭಾಷೆಯಲ್ಲಿ ಮೂಡಿಸುವ ಜಾಗೃತಿ ಪರಿಣಾಮಕಾರಿಯಾಗಿರುವುದಿಲ್ಲ. ಹೆಚ್ಚಿನ ಜನರನ್ನು ತಲುಪುವುದಿಲ್ಲ. ಅದೇ ಸ್ಥಳೀಯವಾಗಿ ಬಳಸುವ ಆಡುಭಾಷೆಯಿಂದ ಜಾಗೃತಿ ಮೂಡಿಸಿದರೆ ಹೆಚ್ಚು ಉಪಯುಕ್ತವಾಗಲಿದೆ. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ರೂಪಿಸುವ ಕಾರ್ಯಕ್ರಮಗಳಲ್ಲಿ ಯಾವ ಯಾವ ಅಂಶಗಳನ್ನು ಸೇರಿಸಬೇಕು ಎಂಬ ಬಗ್ಗೆ ತಜ್ಞರ ತಂಡ ವರದಿ ನೀಡಲಿದೆ. ಅದನ್ನಾಧರಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗುರಿ ತಲುಪುವ ಸನಿಹದಲ್ಲಿದ್ದೇವೆ. 10 ರಿಂದ 12 ಗ್ರಾಮಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಶೌಚಾಲಯಗಳ ನಿರ್ಮಾಣವಾಗಿದೆ. ಶೇ.70ರಷ್ಟು ಈ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ. ಮುಂದಿನ ತಿಂಗಳು ಅಥವಾ ವರ್ಷಾಂತ್ಯಕ್ಕೆ ಗುರಿ ತಲುಪಲಿದ್ದೇವೆ ಎಂದು ಹೇಳಿದರು.
ಜಾಗೃತಿ ವಿಷಯ ಬಂದಾಗ ಗ್ರಾಮೀಣ ಭಾಗದಲ್ಲಿ ಮೊಬೈಲ್ ಬಳಕೆ ಸಾಕಷ್ಟಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ 70 ಬಿಲಿಯನ್ ಜನ ಮೊಬೈಲ್ ಡಾಟಾ, ಇಂಟರ್‍ನೆಟ್‍ನ್ನು ಬಳಸುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ವಿವಿಧ ಪಂಚಾಯ್ತಿಗಳ ಅಧಿಕಾರಿಗಳು ಸೇರಿದರೆ ಸುಮಾರು 1.5 ಲಕ್ಷ ಜನರಾಗುತ್ತಾರೆ. ಅವರೆಲ್ಲರೂ ತಲಾ 20 ಮಂದಿಗೆ ಅರಿವು ಮೂಡಿಸಲು ಮುಂದಾದರೆ 30 ಲಕ್ಷ ಜನರಲ್ಲಿ ಜಾಗೃತಿ ಮೂಡಲಿದೆ. ಇಂತಹ ಕೆಲಸಗಳಲ್ಲಿ ಮೊದಲು ನಮ್ಮಲ್ಲಿ ಜಾಗೃತಿ ಮೂಡಬೇಕಿದೆ ನಂತರ ಸರ್ಕಾರಿ ಯೋಜನೆಗಳ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಹೈದರಾಬಾದ್‍ನ ಯುನಿಸೆಫ್‍ನ ಮೈಟಲ್ ರಸ್ದಿಯಾ, ಐಎಎಸ್ ಅಧಿಕಾರಿಗಳಾದ ಡಾ.ವಿಶಾಲ್, ಎಲ್.ಕೆ. ಅತಿಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ