ಬೆಂಗಳೂರು, ಅ.3- ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗೆ ಕಾಂಗ್ರೆಸ್ ನಾಯಕರು ಕೂಡ ಅ.6ರಂದು ದೆಹಲಿಗೆ ತೆರಳುತ್ತಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ದೆಹಲಿ ಪ್ರವಾಸಕ್ಕೆ ಅ.6ರಂದು ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಅದೇ ದಿನ ಕಾಂಗ್ರೆಸ್ ನಾಯಕರು ಕೂಡ ದೆಹಲಿಗೆ ತೆರಳುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಕರ್ನಾಟಕ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಅಹಮ್ಮದ್ ಪಟೇಲ್, ಗುಲಾಂನಬಿ ಆಜಾದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಅದಕ್ಕೂ ಮುನ್ನ ದೆಹಲಿಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ದೆಹಲಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಮಾನದಂಡಗಳ ಗೊಂದಲ:
ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾಗಬೇಕಾದರೆ ಪ್ರಮುಖವಾಗಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಸಮ್ಮಿಶ್ರ ಸರ್ಕಾರಕ್ಕೆ ರಾಜಕೀಯ ಇಕ್ಕಟ್ಟಿನ ಪರಿಸ್ಥಿತಿಗಳಿದ್ದು, ಇಲ್ಲಿ ಯಾವ ಆಧಾರದ ಮೇಲೆ ಸಂಪುಟ ವಿಸ್ತರಣೆ ಮಾಡಬೇಕೆಂಬ ಜಿಜ್ಞಾಸೆ ನಾಯಕರನ್ನು ಕಾಡುತ್ತಿದೆ.
ಈ ಮೊದಲು ಎಲ್ಲ ನಾಯಕರು ಒಟ್ಟಾಗಿ ಕೂತು ಸಲ್ಲಿಸಿದ ಪಟ್ಟಿಯನ್ನು ಆಧರಿಸಿ ಕಾಂಗ್ರೆಸ್‍ನ 16 ಮಂದಿಗೆ ಸಚಿವ ಸ್ಥಾನ ನೀಡಲಾಯಿತು. ಇನ್ನು ಆರು ಸ್ಥಾನಗಳು ಬಾಕಿ ಇವೆ. ಅವುಗಳಿಗೆ ನೇಮಕಾತಿ ಮಾಡಿದ ಮೇಲೆ ಯಾವ ಮಾನದಂಡ ಆಧಾರದ ಮೇಲೆ ಸಂಪುಟ ವಿಸ್ತರಣೆಯಾಯಿತು ಎಂದು ಸಮಾಧಾನ ಹೇಳದೆ ಇದ್ದರೆ ಶಾಸಕರು ರೊಚ್ಚಿಗೇಳುವ ಅಪಾಯವಿದೆ.
ಪ್ರಾದೇಶಿಕತೆಯನ್ನು ಆಧಾರವಿಗಿಟ್ಟುಕೊಳ್ಳುವುದೇ ಆದರೆ ಈಗಾಗಲೇ ಮಂಡ್ಯ, ತುಮಕೂರು ಅಗತ್ಯಕ್ಕಿಂತಲೂ ಹೆಚ್ಚು ಸ್ಥಾನಗಳನ್ನ ಪಡೆದುಕೊಂಡಿವೆ. ಬಹಳಷ್ಟು ಜಿಲ್ಲೆಗಳಿಗೆ ಅವಕಾಶವೇ ಸಿಕ್ಕಿಲ್ಲ. ಎಷ್ಟು ಸರ್ಕಸ್ ಮಾಡಿದರೂ ಜಿಲ್ಲೆಗೊಂದು ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲದಂತಾಗಿದೆ.
ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಈ ಬಾರಿಯೂ ಅನ್ಯಾಯವಾಗುವುದು ಅನಿವಾರ್ಯವಾಗಲಿದೆ. ಇನ್ನು ಜಾತಿವಾರು ಲೆಕ್ಕಾಚಾರದಲ್ಲೂ ಸಚಿವರನ್ನು ಆಯ್ಕೆ ಮಾಡುವುದು ಕಷ್ಟಸಾಧ್ಯವಾಗಿದೆ. ಬಹಳಷ್ಟು ಜಾತಿಗಳು ಅವಕಾಶವಂಚಿತವಾಗಿದ್ದು, ಈ ಬಾರಿ ಸಾಮಾಜಿಕ ನ್ಯಾಯವನ್ನು ದೃಷ್ಟಿಯಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಾಗಿದೆ.
ಪ್ರಾದೇಶಿಕ ನಾಯಕರ ಸಲಹೆ ಮೇರೆಗೆ ಸಂಪುಟ ವಿಸ್ತರಣೆ:
ಮೂಲಗಳ ಪ್ರಕಾರ ಸಮ್ಮಿಶ್ರ ಸರ್ಕಾರದ ಭದ್ರತೆಗೆ ಸಹಕಾರವಾಗಬಲ್ಲ ಪ್ರಭಾವಿ ನಾಯಕರನ್ನು ಪರಿಗಣಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅವರಂತಹ ಪ್ರಭಾವಿ ನಾಯಕರು ಈಗಾಗಲೇ ಗುಂಪುಗಾರಿಕೆ, ಬಂಡಾಯದ ಚಟುವಟಿಕೆಗಳನ್ನು ಮಾಡಿ ಸಮ್ಮಿಶ್ರ ಸರ್ಕಾರಕ್ಕೆ ನೀರು ಕುಡಿಸಿದ್ದಾರೆ. ಅವರನ್ನು ಸಮಾಧಾನಪಡಿಸಲು ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ.
ಅದೇ ರೀತಿ ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಬಿ.ಸಿ.ಪಾಟೀಲ್ ಮತ್ತಿತರರು ಪ್ರಬಲವಾಗಿ ಲಾಬಿ ನಡೆಸಿದ್ದು, ಅವಕಾಶ ನೀಡದೇ ಇದ್ದರೆ ಪಕ್ಷ ಬಿಟ್ಟು ಹೋಗುವ ಬೆದರಿಕೆ ಹಾಕಿದ್ದಾರೆ.
ಎಲ್ಲರನ್ನೂ ಸರಿದೂಗಿಸಿಕೊಂಡು ಸಂಪುಟ ವಿಸ್ತರಣೆ ಮಾಡುವುದು ಸುಲಭದ ಕೆಲಸವಾಗಿಲ್ಲ. ಹೀಗಾಗಿ ಪ್ರಾದೇಶಿಕವಾರು ನಾಯಕರ ಸಲಹೆಗಳ ಮೇರೆಗೆ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಮುಂದಿನ ಯಾವುದೇ ಬೆಳವಣಿಗೆಯಾದರೂ ಅದನ್ನು ನಿಭಾಯಿಸುವ, ತಹಬದಿಗೆ ತರುವ ಜವಾಬ್ದಾರಿಯನ್ನು ಪ್ರಾದೇಶಿಕ ನಾಯಕರಿಗೆ ನೀಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.