ಮುಂಬೈ: ಜೆಟ್ ಏರ್ ವೇಸ್ ವಿಮಾನದಲ್ಲಿ ಇತ್ತೀಚೆಗೆ ಏರ್ ಕ್ಯಾಬಿನ್ ಒತ್ತಡ ನಿರ್ವಹಿಸಲು ವಿಫಲವಾಗಿದ್ದ ಕಾರಣ ಹಲವು ಪ್ರಯಾಣಿಕರ ಕಿವಿ ಮೂಗಿನಲ್ಲಿ ರಕ್ತ ಸುರಿದ ಪ್ರಕರಣ ಹಿನ್ನಲೆಯಲ್ಲಿ ಈಗ, ಈ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆ ಆ ವಿಮಾನದಲ್ಲಿ ಪ್ರಯಾಣಿಸಿದ್ದ ಎಲ್ಲ 166 ಜನರಿಗೆ ಉಚಿತ ಕಾಂಪ್ಲಿಮೆಂಟರಿ ಟಿಕೆಟ್ ಹಾಗೂ ವಿಮಾನ ಪ್ರಯಾಣದ ಅನೇಕ ಪ್ರಯೋಜನಗಳನ್ನು ನೀಡಿದೆ.
ಸೆಪ್ಟೆಂಬರ್ 27ರಂದೇ ಮುಂಬೈಯಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ತೆರಳಿದ್ದ 166 ಪ್ರಯಾಣಿಕರಿಗೆ ಜೆಟ್ ಏರ್‌ವೇಸ್ ಸಂಸ್ಥೆ ಇ – ಮೇಲ್ ಮೂಲಕ ಕಾಂಪ್ಲಿಮೆಂಟರಿ ಟಿಕೆಟ್ ಹಾಗೂ ವಿಮಾನ ಪ್ರಯಾಣದ ಬೆನಿಫಿಟ್‌ಗಳನ್ನು ನೀಡಿದೆ. ಮಾರ್ಚ್ 31,2019ರವರೆಗೆ ಸಂಬಂಧಪಟ್ಟ ಪ್ರಯಾಣಿಕರು ಅಥವಾ ಬೇರೊಬ್ಬ ಫಲಾನುಭವಿಯ ಹೆಸರು ಸೂಚಿಸುವಂತೆ ಮೇಲ್‌ನಲ್ಲಿ ತಿಳಿಸಿದೆ. ಜತೆಗೆ, ಹೆಚ್ಚು ವಿಮಾನದಲ್ಲಿ ಸಂಚರಿಸುವ ಫಲಾನುಭವಿಗಳ ಅಕೌಂಟ್‌ಗೆ 25 ಸಾವಿರ ಜೆಟ್ ಪ್ರಿವಿಲೇಜ್ ಮೈಲ್ಸ್ ನೀಡಿದೆ. ಇದರಿಂದ ಪ್ರಯಾಣಿಕರು ಅನೇಕ ಪ್ರಯೋಜನ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಸೆಪ್ಟೆಂಬರ್ 20ರಂದು ನಡೆದಿದ್ದ ಘಟನೆಗೆ ಜೆಟ್ ಏರ್ ವೇಸ್ ಕ್ಷಮೆ ಕೋರಿದೆ. ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಸೋರಿದ ಪ್ರಕರಣದ ಬಳಿಕ ಜೆಟ್ ಏರ್‌ವೇಸ್‌ನ ತರಬೇತಿ ಕಾರ್ಯಕ್ರಮಗಳ ಬಗ್ಗೆ ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ ತಪಾಸಣೆ ನಡೆಸುತ್ತಿದೆ.