ಬೆಂಗಳೂರು, ಅ.2- ಗಾಂಧೀಜಿಯವರು ತಮ್ಮ ಜೀವನದ ಕೊನೆಯವರೆಗೆ ಶಾಂತಿಯನ್ನೇ ಬಯಸಿ ಶಾಂತಿ-ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಣ್ಣಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್, ಬೆಂಗಳೂರು ಕೇಂದ್ರ ಜಿಲ್ಲಾ ಪ್ರಚಾರ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150ನೆ ಜನ್ಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರೇರಣಾ ಶಾಂತಿಯಾತ್ರೆ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆ ಸಂದರ್ಭದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧೀಜಿ ಅವರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿ ಶಾಂತಿ ಮಾರ್ಗದಲ್ಲಿ ಪ್ರೇರೇಪಿಸಿ ಹೋರಾಡಿದರು ಎಂದರು.
ದೇಶದ ಆಂತರಿಕ, ಭಯೋತ್ಪಾದಕ ಶಕ್ತಿಗಳು ಅವರನ್ನು ಹತ್ಯೆಗೈದವು. ದುರಂತವೆಂದರೆ ಅಂತಹವನನ್ನೂ ವೈಭವೀಕರಿಸುವ ಶಕ್ತಿಗಳು ಭಾರತದಲ್ಲಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ರೈತರಿಗಾಗಿ ಹಗಲಿರುಳು ಶ್ರಮಿಸಿದ ಶ್ರಮಜೀವಿ, ಪ್ರಾಮಾಣಿಕ ಪ್ರಧಾನಮಂತ್ರಿಯಾಗಿ ದೇಶಸೇವೆ ಸಲ್ಲಿಸಿದ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 115ನೆ ಜನ್ಮ ದಿನಾಚರಣೆಯನ್ನು ಸ್ಮರಿಸಿದ ಅವರು, ಮಾಲಾರ್ಪಣೆ ಮಾಡಿದರು. ಆನಂದರಾವ್ ವೃತ್ತದಿಂದ ಗಾಂಧಿಪ್ರತಿಮೆವರೆಗೆ ಶಾಂತಿಯಾತ್ರೆ ನಡೆಸಲಾಯಿತು.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ದನ್, ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್, ಶೇಖರ್, ರಾಮಕೃಷ್ಣ, ಹೇಮರಾಜ್, ಆನಂದ್, ಪ್ರಕಾಶ್, ಆದಿ, ರಾಜು ಮುಂತಾದವರು ಪಾಲ್ಗೊಂಡಿದ್ದರು.