ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆಗೆ ಮತ್ತೆ ಆಗ್ರಹ: ಡಿ.10ರಿಂದ ಸಮಾವೇಶ

ಬೆಂಗಳೂರು, ಅ.1- ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ದೆಹಲಿಯಲ್ಲಿ ಡಿ.10ರಿಂದ ಮೂರು ದಿನಗಳ ಕಾಲ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮಾತೆ ಮಹಾದೇವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಹಿಂದನ ಸರ್ಕಾರ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಪ್ರಸ್ತಾಪವನ್ನು ಕೋಲ್ಡ್ ಸ್ಟೋರೇಜ್‍ನಲ್ಲಿಟ್ಟಿದೆ. ಆದ್ದರಿಂದ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಯ ತಾಲ್ಕಟೋರ್ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಸೇರಿದಂತೆ ಹಲವು ರಾಜ್ಯಗಳಿಂದ ಬಸವ ತತ್ವ ಪ್ರತಿಪಾದಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆದ ಪ್ರತ್ಯೇಕ ಧರ್ಮ ಹೋರಾಟದ ಮಾದರಿಯಲ್ಲಿಯೇ ದೆಹಲಿಯಲ್ಲಿಯೂ ಹೋರಾಟ ನಡೆಸಿ ಕೇಂದ್ರದ ಮೇಲೆ ಒತ್ತಡ ತರಲಾಗುವುದು. ಪ್ರತ್ಯೇಕ ಧರ್ಮಕ್ಕಾಗಿ ಕಾನೂನು ಹೋರಾಟವನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ