ಬೆಂಗಳೂರು, ಸೆ.30-ಇದೇ ಅಕ್ಟೋಬರ್ 2 ರಂದು ನಾಗ್ಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೆರಳಲಿದ್ದು, ಸಭೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಅಕ್ಟೋಬರ್ 10 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಖಾಲಿ ಇರುವ ಆರು ಸ್ಥಾನ (ಕಾಂಗ್ರೆಸ್ ಪಾಲಿನ) ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ಹೈಕಮಾಂಡ್ ವರಿಷ್ಠರೊಂದಿಗೆ ಅಂತಿಮ ಹಂತದ ಮಾತುಕತೆಯನ್ನು ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರು ನಡೆಸಲಿದ್ದಾರೆ.
ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಇಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಒಕ್ಕಲಿಗರು, ಹಿಂದುಳಿದವರು ಮತ್ತು ಎಡಗೈ ಸಮುದಾಯದ ಒಬ್ಬರಿಗೆ ಈ ಬಾರಿಯ ಸಂಪುಟದಲ್ಲಿ ಆದ್ಯತೆ ನೀಡಲು ತೀರ್ಮಾನಿಸಿದ್ದು, ಅದರಂತೆ ಪಟ್ಟಿ ತಯಾರಿಸಲಾಗಿದೆ.
ಅಕ್ಟೋಬರ್ 3 ರ ನಂತರ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ನಡೆಯಲಿದ್ದು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಬಾದಾಮಿ ಹಾಗೂ ಮೈಸೂರಿನಲ್ಲಿ ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆಯ ಸುಳಿವು ನೀಡುತ್ತಿದ್ದಂತೆ ಸಚಿವಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.
ಹೈಕಮಾಂಡ್ ನಾಯಕರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಹಿರಿತನ, ಜಾತಿ, ಭೌಗೋಳಿಕ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.
ಕಾರ್ಯಕಾರಿಣಿ ಸಭೆ ನಂತರ ಎಐಸಿಸಿ ಅಧ್ಯಕ್ಷ್ಷ ರಾಹುಲ್ಗಾಂಧಿಯವರನ್ನು ಭೇಟಿ ಮಾಡಿ ಸಂಪುಟ ಸೇರ್ಪಡೆಯಾಗುವವರ ಬಗ್ಗೆ ಸಿದ್ದರಾಮಯ್ಯ, ವೇಣುಗೋಪಾಲ್, ದಿನೇಶ್ಗುಂಡೂರಾವ್ ಚರ್ಚೆ ನಡೆಸಲಿದ್ದಾರೆ.
ಬಂಡಾಯದ ಬೇಗುದಿಯಲ್ಲಿ ಬೆಂದು ಈಗಷ್ಟೇ ಹೊರಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸಂಪುಟ ವಿಸ್ತರಣೆ ಸವಾಲಾಗಿ ಪರಿಣಮಿಸಿದೆ.
ಖಾಲಿ ಇರುವ ಆರು ಸ್ಥಾನಗಳಿಗೆ ಸುಮಾರು 25ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಿಂದ ಮತ್ತೆ ಭಿನ್ನಮತ ಉಂಟಾಗಬಹುದೆಂಬ ಆತಂಕ ಹೈಕಮಾಂಡ್ನ್ನು ಕಾಡುತ್ತಿದೆ. ಆದರೆ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಹಲವರಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ನ ಹಲವು ಮುಖಂಡರು ಹೇಳುತ್ತಿದ್ದಾರೆ. ಭಿನ್ನಮತ ಉಲ್ಬಣಗೊಳ್ಳದಂತೆ ಜಾಣ್ಮೆಯ ಮೂಲಕ ಸಚಿವ ಸಂಪುಟ ವಿಸ್ತರಣೆ ಮಾಡಬೇಕಿದೆ.
ಈಗಾಗಲೇ ಶಾಸಕರಾದ ಸುಧಾಕರ್, ಎಂಟಿಬಿ ನಾಗರಾಜ್, ಪಕ್ಷೇತರ ಶಾಸಕ ನಾಗೇಶ್ ರೆಸಾರ್ಟ್ ಯಾತ್ರೆ ಮಾಡಲು ಮುಂದಾಗಿದ್ದರು. ಮತ್ತೆ ಇನ್ನೂ ಹಲವು ಸಚಿವಾಕಾಂಕ್ಷಿಗಳು ನಾಯಕರುಗಳ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಹೇರಿದ್ದರು.
ಹೈಕಮಾಂಡ್ ಯಾವ ಕ್ರಮ ತೆಗೆದುಕೊಳ್ಳುತ್ತದೆ. ಬಂಡಾಯವಾಗದಂತೆ ಸಚಿವ ಸಂಪುಟ ವಿಸ್ತರಣೆ ಯಾವ ರೀತಿ ಮಾಡುತ್ತದೆ. ಹಾಲಿ ಇರುವ ಕೆಲ ಸಚಿವರ ಖಾತೆ ಬದಲಾವಣೆ ಕೂಡ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಅತೃಪ್ತರನ್ನು ತಣಿಸಲು ಹಲವು ಯೋಜನೆಗಳನ್ನು ಹೈಕಮಾಂಡ್ ರೂಪಿಸಿದೆ. ಯಾವ ರೀತಿ ಜಾರಿಗೊಳಿಸುತ್ತದೆ ಎಂಬುದನ್ನು ಕಾದುನೋಡಬೇಕು.