ಮೇಯರ್ ಚುನಾವಣೆಯಲ್ಲಿ ಫಲಿಸಿದ ರಾಮಲಿಂಗಾರೆಡ್ಡಿ ತಂತ್ರ

ಬೆಂಗಳೂರು, ಸೆ.30-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಯಾರು ಅಧಿಕಾರ ಗದ್ದುಗೆ ಹಿಡಿಯಲಿದ್ದಾರೆ ಎಂದು ಕಾತುರದಿಂದ ನೋಡುತ್ತಿದ್ದರು. ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ದೊರೆತಿಲ್ಲ. ಆದ್ದರಿಂದ ಮೇಯರ್ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರು ಮೌನವಾಗಿದ್ದರು ಎಂದು ತಪ್ಪು ತಿಳಿದ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಏಳು ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಅಸಮಾಧಾನವಿದೆ. ಅವರು ಈ ಬಾರಿ ಮೇಯರ್ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೌನ ವಾಗಿದ್ದಾರೆ ಎಂದು ಕೊಳ್ಳಲಾಗಿತ್ತು. ಆದರೆ ರಾಮಲಿಂಗಾರೆಡ್ಡಿ ಅವರ ತಂತ್ರವೇ ಬೇರೆಯಾಗಿತ್ತು.
ಬಿಜೆಪಿ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡಬಾರದು ಎಂದು ಕಾಂಗ್ರೆಸ್-ಜೆಡಿಎಸ್ ಪಕ್ಷೇತರರನ್ನು ಒಗ್ಗೂಡಿಸಿದರು.

ಬಿಜೆಪಿ ಪಕ್ಷವು ಬಿಬಿಎಂಪಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಆಪರೇಷನ್ ಕಮಲ ಮಾಡುವ ಯತ್ನ ನಡೆಸಿತಲ್ಲದೆ, ಪಕ್ಷೇತರ ಸದಸ್ಯರನ್ನು ಫಾರಿನ್ ಟೂರ್ ಕಳಿಸಲು ಮುಂದಾಗಿತ್ತು. ಇದರ ಸುಳಿವರಿತ ರಾಮಲಿಂಗಾರೆಡ್ಡಿ ಅವರು ಕಾರ್ಯಪ್ರವೃತ್ತರಾಗಿ ಪಾಲಿಕೆ ಸದಸ್ಯರನ್ನು ಸಂಘಟಿಸಿ ಯಾರೂ ಪಕ್ಷಾಂತರ ಮಾಡದಂತೆ ಒಗ್ಗಟ್ಟು ಪ್ರದರ್ಶಿಸಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತವನ್ನು ಪ್ರತಿಷ್ಠಾಪಿಸಿದರು.

ಮೇಯರ್ ಆಯ್ಕೆ ಚುನಾವಣೆ ಸಂದರ್ಭದಲ್ಲಿ ನಡೆದ ಹಗ್ಗಾಜಗ್ಗಾಟ, ಸದಸ್ಯರು-ಶಾಸಕರ ನಡುವೆ ನಡೆದ ಮಾತಿನ ಚಕಮಕಿ, ಹೊಡಿ-ಬಡಿ ಹಂತಕ್ಕೆ ತಲುಪಿದ ಪರಿಸ್ಥಿತಿ ಯಾವುದಕ್ಕೂ ಜಗ್ಗದೆ ಸಮಚಿತ್ತರಾಗಿದ್ದ ರಾಜಕೀಯ ಚಾಣಾಕ್ಷ ರಾಮಲಿಂಗಾರೆಡ್ಡಿ ಅವರು ಕೈಗೊಂಡ ಕ್ರಮದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಆಡಳಿತ ನಾಲ್ಕನೇ ವರ್ಷ ಯಶಸ್ವಿಯಾಗಿ ಅಧಿಕಾರ ಹಿಡಿಯುವಂತಾಯಿತು.

ಬೆಂಗಳೂರು ನಗರ ಪ್ರದೇಶದಲ್ಲಿ ಪಕ್ಷ ಸಂಘಟನೆ, ಸಾರ್ವಜನಿಕರ ನಡುವೆ ಉತ್ತಮ ಸೇವೆ, ಜನಾಭಿವೃದ್ಧಿ ಕೆಲಸಗಳ ಮೂಲಕ ಜನಮಾನಸದಲ್ಲಿ ಮನೆ ಮಾಡಿರುವ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬುದು ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹವಾಗಿದೆ.

ಆದರೆ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನದ ಬೇಡಿಕೆಯನ್ನು ಎಲ್ಲೂ ಇಟ್ಟಿಲ್ಲ. ಈವರೆಗೂ ಪಕ್ಷಕ್ಕೆ ಮುಜುಗರವಾಗುವಂತಹ ಯಾವುದೇ ಹೇಳಿಕೆಗಳಾಗಲಿ ನೀಡಿಲ್ಲ. ಪಕ್ಷ ಜವಾಬ್ದಾರಿ ವಹಿಸಿದರೆ ಅದನ್ನು ಸಮರ್ಥವಾಗಿ ನಿಭಾಯಿಸುವುದು ಅವರ ನಡೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ